Advertisement

ಅನುದಾನ ಬಳಕೆಗೆ ಮೂಡದ ಒಮ್ಮತ!

12:34 PM Mar 15, 2022 | Team Udayavani |

ಬಾಗಲಕೋಟೆ: ದೇಶದಲ್ಲೇ ವಿಶಿಷ್ಟವಾಗಿ ನಡೆಯುವ ಬಾಗಲಕೋಟೆ ಹೋಳಿ ಹಬ್ಬ ಆಚರಣೆಗೆ ಸರ್ಕಾರ, ಸಾಂಸ್ಕೃತಿಕ ಮಾನ್ಯತೆ ನೀಡಲು ರಾಜ್ಯ ಸರ್ಕಾರ ನೀಡಿದ 10 ಲಕ್ಷ ಅನುದಾನ ನೀಡಿದ್ದು, ಈ ಅನುದಾನ ಬಳಕೆಗೆ ಜಿಲ್ಲಾಡಳಿತ ಮತ್ತು ಹೋಳಿ ಆಚರಣೆ ಸಮಿತಿಯ ಮಧ್ಯೆ ಒಮ್ಮತ ಮೂಡಿಲ್ಲ. ಹೀಗಾಗಿ ಹೋಳಿ ಆಚರಣೆ ಸಮಿತಿ, ನಾವು ಅನುದಾನ ಬಳಕೆ ಮಾಡಲ್ಲ ಎಂದು ಸಂಬಂಧಿಸಿದ ಇಲಾಖೆಗೆ ಪತ್ರದ ಮೂಲಕ ತಿಳಿಸಿದೆ ಎನ್ನಲಾಗಿದೆ.

Advertisement

ಹೌದು, ಪೇಶ್ವೆ ಅವರ ಆಡಳಿತದಿಂದಲೇ ಬಾಗಲಕೋಟೆಯ ಹೋಳಿ ಆಚರಣೆಗೆ ದೊಡ್ಡ ಹೆಸರಿದೆ. ಜತೆಗೆ ಅಂದಿನಿಂದಲೂ ಇಲ್ಲಿ ಹಲಗೆ ಮೇಳ ಎಂಬ ವಿಶಿಷ್ಟ-ವಿಶೇಷ ಪಾರಂಪರಿಕ ಕಲೆಯ ಪ್ರದರ್ಶನ ನಡೆಯುತ್ತದೆ. ಹೋಳಿ ಹಬ್ಬ ಬಂದರೆ ಸಾಕು, ನಗರದ ಹಲವೆಡೆ ಹಲಗೆ ಮೇಳ ಆಯೋಜಿಸಿ, ಹಲಗೆ ವಾದನದ ಸಂಪ್ರದಾಯ ಇಂದಿಗೂ ಜೀವಂತವಾಗಿಡಲಾಗಿದೆ.

ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ ಅವರ ವಿಶೇಷ ಆಸಕ್ತಿ ಮೇರೆಗೆ ಹೋಳಿ ಆಚರಣೆಗೆ ಸರ್ಕಾರದಿಂದ ಸಾಂಸ್ಕೃತಿಕ ಮಾನ್ಯತೆ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಲಕ್ಷ ಅನುದಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇಲಾಖೆಯ ನಿಯಮಾವಳಿ ಪ್ರಕಾರ, ಚಾಲುಕ್ಯ ಉತ್ಸವ, ರನ್ನ ವೈಭವದಂತೆ ಹೋಳಿ ಹಬ್ಬವನ್ನೂ ಸಾಂಸ್ಕೃತಿಕ ಉತ್ಸವವನ್ನಾಗಿ ಆಚರಿಸಲು ನಿರ್ಧರಿಸಿ ಅದಕ್ಕಾಗಿ ಯೋಜನೆ ಕೂಡ ರೂಪಿಸಲಾಗಿದೆ.

ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಹೋಳಿ ಆಚರಣೆ ನಡೆಸಲು ಆಗಿರಲಿಲ್ಲ. ಹೀಗಾಗಿ ಆ 10 ಲಕ್ಷ ಅನುದಾನ, ಜಿಲ್ಲಾಡಳಿತದ ಉತ್ಸವ ಆಚರಣೆ ಸಮಿತಿ ಖಾತೆಯಲ್ಲಿಯೇ ಇತ್ತು. ಈ ಬಾರಿ ಹೋಳಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಹೋಳಿ ಆಚರಣೆ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಹೋಳಿಗೆ ಸಾಂಸ್ಕೃತಿಕ ಮಾನ್ಯತೆ ನೀಡುವ ಕುರಿತು ಚರ್ಚೆ ಮಾಡಲಾಗಿತ್ತು.

ಇಲಾಖೆಯ ನಿಯಮಾವಳಿ ಪ್ರಕಾರ, ಸೋಗಿನ ಬಂಡಿಗಳ ಸ್ಪರ್ಧೆ, ನಮ್ಮೂರ ಹಬ್ಬ-ನಮ್ಮೂರ ರಂಗು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ತೀರ್ಮಾನಿಸಿ, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಬಾಗಲಕೋಟೆ ಹೋಳಿ ಆಚರಣೆಗೆ ಇಲ್ಲಿನ ಪ್ರತಿಯೊಬ್ಬ ಜನರೂ ಭಾಗವಹಿಸುತ್ತಾರೆ. ಅವರ ನಿರೀಕ್ಷೆಗಳೇ ಬೇರೆ. ಬಣ್ಣದ ಬಂಡಿ ಮತ್ತು ಸೋಗಿನ ಬಂಡಿಗಳಿಗೆ ಅನುದಾನ ಕೊಡಬೇಕೆಂಬ ಪ್ರಮುಖ ಒತ್ತಾಯ ಕೇಳಿಬಂತು. ಹಲವರು, ಹಲವು ರೀತಿಯ ಬೇಡಿಕೆ-ಆಶಯ ವ್ಯಕ್ತಪಡಿಸಿದಾಗ, ಈ ಅನುದಾನ ಬಳಕೆಗೆ ಒಮ್ಮತ ಮೂಡಿ ಬರಲಿಲ್ಲ ಎನ್ನಲಾಗಿದೆ. ಹೀಗಾಗಿ ಸಧ್ಯ ತರಾತುರಿಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಿ, ವಿರೋಧ ಕಟ್ಟಿಕೊಳ್ಳದೇ, ಮುಂದಿನ ವರ್ಷದಿಂದ ಅನುದಾನ ಬಳಕೆಗೆ ಮುಂಚೆಯೇ ನಿರ್ಧಾರ ಕೈಗೊಂಡರಾಯಿತು ಎಂಬ ನಿರ್ಧಾರಕ್ಕೆ ಬಂದಿರುವ ಹೋಳಿ ಆಚರಣೆ ಸಮಿತಿ, ಈ ವರ್ಷ ಅನುದಾನ ಬಳಕೆ ಮಾಡದಿರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Advertisement

ಸಾಂಸ್ಕೃತಿಕ ರಂಗು: ಹೋಳಿ ಆಚರಣೆ ಈ ಬಾರಿ ವಿದ್ಯಾಗಿರಿ, ನವನಗರಕ್ಕೂ ವಿಸ್ತರಿಸಿದ್ದು, ಮಾ. 18ರಂದು ಒಂದು ದಿನ ಬಣ್ಣದ ಬಂಡಿಗಳ ಭರ್ಜರಿ ಆಟ ನಡೆಯಲಿದೆ. ಜತೆಗೆ ಸೋಗಿನ ಬಂಡಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೇಶದಿಂದ 3 ದಿನಗಳ ಕಾರ್ಯಕ್ರಮವನ್ನು ನಾಲ್ಕು ದಿನಕ್ಕೆ, ವಿದ್ಯಾಗಿರಿ-ನವನಗರಕ್ಕೆ ಮತ್ತೂಂದು ದಿನ ಸಹಿತ ಒಟ್ಟು ಐದು ದಿನ ವಿಶೇಷ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯಿಂದ ಯೋಜನೆ ರೂಪಿಸಲಾಗಿತ್ತು. ಜತೆಗೆ ಖ್ಯಾತ ಜಾನಪದ ಗಾಯಕ ಗುರುರಾಜ ಹೊಸಕೋಟಿ ಅವರಿಂದ ಬಾಗಲಕೋಟೆ, ನವನಗರ ಹಾಗೂ ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹಲಗೆ ಮಜಲು ಕಾರ್ಯಕ್ರಮವನ್ನು ಚಿನ್ನರಿಗಾಗಿ ವಿಶೇಷವಾಗಿ ಆಯೋಜಿಸಲು, ಸೋಗಿನ ಬಂಡಿಗಳಿಗೆ ತಲಾ 5 ಸಾವಿರ ವಿಶೇಷ ಬಹುಮಾನ ನೀಡಲು ಚರ್ಚೆ ನಡೆದಿತ್ತು. ಆದರೆ, ಬಣ್ಣದ ಬಂಡಿಗಳು, ಸೋಗಿನ ಬಂಡಿಗಳಿಗೆ ಅನುದಾನ ಕೊಡುವಂತೆ ಹೆಚ್ಚು ಬೇಡಿಕೆ ಬಂದಿತ್ತು.

ಒಟ್ಟಾರೆ, ಬಾಗಲಕೋಟೆ ಹೋಳಿ ಆಚರಣೆಗೆ ಸಾಂಸ್ಕೃತಿಕ ಮಾನ್ಯತೆ ನೀಡಲು ಅನುದಾನ ಬಳಕೆಗೆ ಒಮ್ಮತ ಮೂಡಿಲ್ಲ. ಹೀಗಾಗಿ ಅನುದಾನ ಬಳಕೆಯೂ ಅನುಮಾನ ಎನ್ನಲಾಗಿದೆ.

 

ಈ ವರ್ಷ ಸರ್ಕಾರದ ಅನುದಾನ ಬಳಕೆ ಮಾಡದಿರಲು ಸಮಿತಿ ನಿರ್ಧರಿಸಿದೆ. ಐದು ದಿನಗಳ ವಿಶೇಷ ಕಾರ್ಯಕ್ರಮಗಳಿಗೆ ಮುಂದಿನ ವರ್ಷ ಮುಂಚಿತವಾಗಿ ಚರ್ಚಿಸಿ, ಪಟ್ಟಿ ತಯಾರಿಸಲಾಗುವುದು. ಪ್ರತಿವರ್ಷದಂತೆ ಈ ವರ್ಷ, ಹೋಳಿ ಆಚರಣೆ, ಬಣ್ಣದಾಟ, ಸೋಗಿನ ಬಂಡಿಗಳು ಸಾಗಲಿವೆ. ಬಾಗಲಕೋಟೆಯ ಜನರು ಪ್ರವಾಸಕ್ಕೆ ಹೋಗದೇ, ಹೋಳಿ ಹಬ್ಬದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು.

ಮಹಾಬಲೇಶ್ವರ ಗುಡಗುಂಟಿ, ಪ್ರಧಾನ ಕಾರ್ಯದರ್ಶಿ, ಹೋಳಿ ಆಚರಣೆ ಸಮಿತಿ

 

ಹೋಳಿ ಆಚರಣೆಗೆ ಸಾಂಸ್ಕೃತಿಕ ಮಾನ್ಯತೆ ನೀಡಲು ಸರ್ಕಾರ ಅನುದಾನ ನೀಡಲಾಗಿದೆ. ನಿಯಮಾವಳಿ ಪ್ರಕಾರ ಕಾರ್ಯಕ್ರಮ ನಡೆಸಲು ಹೋಳಿ ಆಚರಣೆ ಸಮಿತಿಯೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ಈಗ ಸಮಿತಿಯಿಂದ ಈ ವರ್ಷ ಅನುದಾನ ಬಳಕೆ ಮಾಡಲ್ಲ ಎಂದು ಪತ್ರ ಕೊಟ್ಟಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಹೇಮಾವತಿ ಎನ್‌, ಸಹಾಯಕ ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next