ಬೆಂಗಳೂರು: “ಬಿಎಂಟಿಸಿ ವ್ಯಾಪ್ತಿಯಲ್ಲಿರುವ ವೋಲ್ವೊ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಮೂಲಕ ಕೋಲಾರ, ತುಮಕೂರು, ದಾವಣಗೆರೆ ಮೊದಲಾದ ಪ್ರದೇಶಕ್ಕೆ ಹಗಲು ಹೊತ್ತಿನಲ್ಲಿ ಸಂಚರಿಸಲು ವ್ಯವಸ್ಥೆ ಮಾಡುವ ಮೂಲಕ ನಷ್ಟ ಕಡಿಮೆ ಮಾಡಲು ಚಿಂತನೆ ನಡೆಸಿದ್ದೇವೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಬುಧವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಲ್ವೊ ಬಸ್‌ಗಳು ದಿನಕ್ಕೆ ಕನಿಷ್ಠ 300 ಕಿ.ಮೀ.ಸಂಚಾರ ಮಾಡಿದಾಗ ಮಾತ್ರ ಅದರ ಸಮರ್ಪಕ ನಿರ್ವಹಣೆ ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ವೋಲ್ವೊ ಬಸ್‌ಗಳನ್ನು 100ರಿಂದ 150 ಕಿ.ಮೀ. ಓಡಿಸುವುದೇ ಕಷ್ಟವಾಗಿದೆ.
ಹೀಗಾಗಿ, ಕೆಎಸ್‌ಆರ್‌ಟಿಸಿ ಮೂಲಕ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹಗಲು ಸಂಚಾರಕ್ಕೆ ಈ ವಾಹನಗಳನ್ನು ಬಳಸಲು ಚಿಂತನೆ ನಡೆಸಿದ್ದೇವೆ ಎಂದರು. ವೋಲ್ವೊ ಬಸ್ ಸಂಚಾರದಿಂದ ಬಿಎಂಟಿಸಿಗೆ 75ರಿಂದ 90 ಕೋಟಿ ರೂ.ಗಳಷ್ಟು ನಷ್ಟವಾಗುತ್ತಿದೆ. ಹೀಗಾಗಿ, ಈ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಮೂಲಕ ದೂರ ಸಂಚಾರಕ್ಕೆ ಬಳಸಿಕೊಂಡು, ನಗರ ವ್ಯಾಪ್ತಿಯಲ್ಲಿ ವೋಲ್ವೊ ಬದಲಿಗೆ ಬೇರೆ ಬಸ್‌ಗಳ ವ್ಯವಸ್ಥೆ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.
ಇದಕ್ಕಾಗಿ ಸಮಿತಿಯನ್ನು ರಚನೆ ಮಾಡಿದ್ದೇವೆ. ಸಮಿತಿಯಲ್ಲಿರುವ ತಜ್ಞರು ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಷ್ಟದ ಪ್ರಮಾಣ ಸೇರಿದಂತೆ ಎಲ್ಲ ಅಂಶಗಳನ್ನು ಕೂಲಂಕಶವಾಗಿ ಪರಿಶೀಲಿಸಿ ವರದಿ ಸಲ್ಲಿಸಲಿದ್ದಾರೆ. ಸಮಿತಿಯ ವರದಿ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.
ಬಿಎಂಟಿಸಿ ಒಂದೇ ವರ್ಷದಲ್ಲಿ 350 ಕೋಟಿ ರೂ.ನಷ್ಟ ಅನುಭವಿಸಿರುವುದಕ್ಕೆ ಕಾರಣ ಏನು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ವೋಲ್ವೊ ಬಸ್‌ಗಳಿಂದ ಆಗುವ ನಷ್ಟವನ್ನು ತಗ್ಗಿಸಲು ಬೇಕಾದ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದರು.