ಕುಳಗೇರಿ ಕ್ರಾಸ್ (ಬಾಗಲಕೋಟೆ): ಪ್ರತಿಯೊಬ್ಬ ರೈತರಿಗೂ ಕೃಷಿ ಇಲಾಖೆ ಸೇರಿದಂತೆ ಕೃಷಿಗೆ ಸಂಬಂದಿಸಿದ ಎಲ್ಲ ಇಲಾಖೆಯ ಮಾಹಿತಿ ಮುಖ್ಯವಾಗಿ ಇರಲೇಬೇಕು ಎಂದು ಬಾಗಲಕೋಟೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಮೌನೇಶ್ವರಿ ಕಮ್ಮಾರ ಹೇಳಿದರು.
ಅವರು ಚಿಮ್ಮನಕಟ್ಟಿ ಗ್ರಾಮಕ್ಕೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿ, ಹಲವಾರು ಉಪಯುಕ್ತ ಮಾಹಿತಿಗಳನ್ನು ರೈತರಿಗೆ ತಿಳಿಸಿದರು.
ಮುಂಗಾರು ಬಿತ್ತನೆ ಮಾಡುವ ರೈತರು ಮೊದಲು ಬೀಜಗಳಿಗೆ ತಪ್ಪದೇ ಬೀಜೋಪಚಾರ ಮಾಡಬೇಕು. ಇದರಿಂದ ಬೆಳೆಗಳಿಗೆ ಬರುವ ರೋಗಗಳನ್ನು ತಡೆಗಟ್ಟಿ ಇಳುವರಿಯನ್ನೂ ಸಹ ಹೆಚ್ಚಿಸಿಕೊಳ್ಳಬಹುದು ಎಂದು ರೈತರಿಗೆ ಸಲಹೆ ನೀಡಿದರು.
ರೈತರು ತಮ್ಮ ಮೋಬೈಲ್ ಸಂಖ್ಯೆ ಸೇರಿಸಿಕೊಂಡು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ನಮ್ಮ ಇಲಾಖೆ ಮೂಲಕ ವಾರದಲ್ಲಿ ಎರೆಡು ಬಾರಿ ವಾರ ಮುಂಚಿತವಾಗಿಯೇ ಹವಾಮಾನ ಮುನ್ಸೂಚನೆಯನ್ನು ತಾವು ತಿಳಿದುಕೊಳ್ಳಬಹುದು. ಇದರಿಂದ ರೈತರು ಬಿತ್ತುವುದರಿಂದ ಹಿಡಿದು ರಾಶಿ ಮಾಡಿ ಬಣಿವೆ ಒಟ್ಟುವವರೆಗೂ ಸಾಕಷ್ಟು ಅನಕೂಲವಾಗಲಿದೆ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಡಾ.ಎಸ್ ಸಿ ಅಂಗಡಿ, ಹವಾಮಾನ ತಜ್ಞ ಡಾ.ಸುನೀಲ, ಕೃಷಿ ಅಧಿಕಾರಿ ಬಸವರಾಜ ಬುದ್ನಿ ಮಾತನಾಡಿ, ಮಾಹಿತಿ ತಂತ್ರಜ್ಞಾನ ಕಾಲದಲ್ಲಿ ಜೀವಿಸುತ್ತಿರುವ ನಾವು ಕೃಷಿಯಲ್ಲಿ ಆಧುನಿಕ ಪದ್ಧತಿ ಹಾಗೂ ಯಂತ್ರೋಪಕರಣ ಬಳಕೆ ಮಾಡಿಕೊಳ್ಳಬೇಕು ಇದಕ್ಕೆಲ್ಲ ಇಲಾಖೆಯಲ್ಲಿ ಸೂಕ್ತ ಅನುದಾನ ಸಹ ಇದೆ. ಭೂಮಿಯಲ್ಲಿನ ಲೋಪ-ದೋಷ ಅರಿಯಲು ಪ್ರತಿ ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡಬಾರದು ರೈತರು ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಒತ್ತು ನೀಡಬೇಕು ಎಂದು ಸಾಕಷ್ಟು ಸಲಹೆಗಳನ್ನ ನೀಡಿದರು.
ಕೃಷಿ ಅಧಿಕಾರಿ ಎಸ್ ಎಸ್ ಮರಿದ್ಯಾವನ್ನವರ, ಶಿವನಗೌಡ ಗೌಡರ ಸೇರಿದಂತೆ ರೈತರು ಇದ್ದರು ಇದೆ ಸಂದರ್ಭದಲ್ಲಿ ಗ್ರಾಮದ ರೈತರ ಜಮಿನುಗಳಿಗೆ ಭೇಟಿ ನೀಡಿ ವಿಕ್ಷಣೆ ಮಾಡಿದರು.