ಬೆಂಗಳೂರು: ‘ವಿದ್ಯಾವಂತ ನಿರುದ್ಯೋಗಿಗಳು ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧ ಮುಂಭಾಗ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ‘ಐರಾವತ’ ಯೋಜನೆಯಡಿ 209 ಎಸ್‌ಸಿ-ಎಸ್‌ಟಿ ಫಲಾನುಭವಿಗಳಿಗೆ ಕಾರು ವಿತರಿಸಿ ಮಾತನಾಡಿದರು. ‘ರಾಜ್ಯದ 4500 ಕುಟುಂಬಗಳ ಜೀವನೋಪಾಯಕ್ಕೆ ಅಡಿಪಾಯ ಹಾಕುವಂತ ಮಹತ್ತರ ಆಶಯ ಇಟ್ಟುಕೊಂಡು ಐರಾವತ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.
ಯುವಸಮೂಹ ಜೀವನವನ್ನು ಸವಾಲಾಗಿ ಸ್ವೀಕರಿಸಿ ಯೋಜನೆ ಲಾಭ ಪಡೆದು ಅಭಿವೃದ್ದಿ ಹೊಂದಬೇಕು. ರಾಜ್ಯ ಸರ್ಕಾರವು ಯುವಜನತೆ ಸ್ವಂತ ಉದ್ದಿಮೆ, ವ್ಯಾಪಾರ ನಡೆಸಲು ಸಾಕಷ್ಟು ಯೋಜನೆ ರೂಪಿಸಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ನಿರುದ್ಯೋಗಿ ಯುವಕ-ಯುವತಿಯರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ ಸಾಮಾಜಿಕ ಉದ್ಯಮಶೀಲತಾ ಅಭಿವೃದ್ದಿ ಯೋಜನೆಯನ್ನು ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಬೋವಿ, ತಾಂಡಾ, ಆದಿಜಾಂಬವ ಅಭಿವೃದ್ಧಿ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಗ್ ಖರ್ಗೆ ಮಾತನಾಡಿ, ಐರಾವತ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 225 ಕೋಟಿ ರೂ. ವೆಚ್ಚದಲ್ಲಿ 4,500 ಮಂದಿಗೆ ವಾಹನ ನೀಡಲಾಗುತ್ತಿದೆ. ಈ ವಾಹನಗಳನ್ನು ಓಲಾ- ಊಬರ್ ಸಂಸ್ಥೆಗಳ ಸಹಯೋಗದೊಂದಿಗೆ ನೀಡಲಾಗುತ್ತಿದೆ. ಫಲಾನುಭವಿಗಳಿಗೆ ತರಬೇತಿ ಹಾಗೂ ಮಾರುಕಟ್ಟೆ ದೊರಕಿಸಿಕೊಡಲು ನೆರವು ನೀಡಲಾಗುತ್ತಿದೆ. ಈ ಯೋಜನೆಯ ಫಲಾನುಭವಿಗಳು ಒಂದು ವರ್ಷ ಕಡ್ಡಾಯವಾಗಿ ಓಲಾ- ಊಬರ್ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸಬೇಕಾಗಿರುತ್ತದೆ.
ಈಗ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಫಲಾನುಭವಿಗಳಿಗೆ ಕಾರು ವಿತರಿಸಲಾಗಿದ್ದು ಇದೇ ರೀತಿ ಮೈಸೂರು, ಬೆಳಗಾವಿ, ಕಲಬುರಗಿ, ದಕ್ಷಿಣ ಕನ್ನಡ, ಬಳ್ಳಾರಿ, ಧಾರವಾಡ ಜಿಲ್ಲಾ ಕೇಂದ್ರಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಐರಾವತ ಯೋಜನೆಯಡಿ ಫಲಾನುಭವಿಗಳಿಗೆ ಐದು ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದ್ದು ಚಾಲಕರೇ ಮಾಲೀಕರಾಗಿ ಬದಲಾವಣೆಯಾಗುತ್ತಿದ್ದಾರೆ. ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯಲ್ಲೂ ಸಾಕಷ್ಟು ಅಭಿವೃದ್ಧಿಯಾಗಲಿದೆ. ಈಗಾಗಲೇ ಯೋಜನೆಯಡಿ ಫಲಾನುಭವಿ ಆಗಿರುವವರು ಮಾಸಿಕ 90 ಸಾವಿರ ರೂ. ದುಡಿಯುತ್ತಿದ್ದಾರೆ ಎಂದು ತಿಳಿಸಿದರು.