Advertisement
ಉಸೇನ್ ಬೋಲ್ಟ್ ಭಾವಚಿತ್ರವಿಟ್ಟು ಜನಪ್ರತಿನಿಧಿಗಳ ಕಾಲೆಳೆದ ಜನರು..!ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಹೆಸರನ್ನ ಯಾರು ಕೇಳಿಲ್ಲ ಹೇಳಿ. ಚಿರತೆ ವೇಗವನ್ನೇ ಮೀರಿಸೋ ರೀತಿಯಲ್ಲಿ ಓಡಿ ಎಲ್ಲರನ್ನ ಹುಬ್ಬೇರಿಸುವ ಹಾಗೆ ಮಾಡಿದ ಖ್ಯಾತಿ ಉಸೇನ್ ಬೋಲ್ಟ್ ಅವರದ್ದು. ಅಂತಹ ಉಸೇನ್ ಬೋಲ್ಟ್ ಕಾಫಿನಾಡಿನ ಕುಗ್ರಾಮವೊಂದಕ್ಕೆ ಬರ್ತಾರೆ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಳ್ಳೋಡಿ ರಸ್ತೆ ಸ್ಥಿತಿಯಂತೂ ಕೇಳೋದೇ ಬೇಡ. ಆ ರಸ್ತೆಯನ್ನ ನೋಡಿದ್ರೆ ಯಾರೂ ಕೂಡ ಇದು ರಸ್ತೆ ಅಂತಾ ಹೇಳೋದಿಲ್ಲ, ರಸ್ತೆ ತುಂಬಾ ಗುಂಡಿಗಳೇ, ಕೆಸರು ಗದ್ದೆಯ ರೀತಿ ಬದಲಾಗಿರೋ ರಸ್ತೆಯಲ್ಲಿ ಓಡಾಡಬೇಕು ಅಂದ್ರೆ ಧಮ್, ತಾಕತ್ತು ಇರ್ಲೇ ಬೇಕು.
Related Articles
ಸದ್ಯ ಕಳಸ ತಾಲೂಕಿನ ಮುಳ್ಳೋಡಿ ಗ್ರಾಮದ ರಸ್ತೆಯ ಈ ಕಥೆ-ವ್ಯಥೆ ಇಂದು ನಿನ್ನೆಯದಲ್ಲ. ಸುಮಾರು 40 ವರ್ಷಗಳಿಂದ ಈ ರಸ್ತೆಗೆ ದುರಸ್ತಿ ಭಾಗ್ಯವೇ ಸಿಕ್ಕಿಲ್ಲ. ಅದರಲ್ಲೂ ಮಳೆಗಾಲ ಬಂತಂದ್ರೆ ಸಂಪೂರ್ಣ ಕೆಸರುಮಯವಾಗಿ ಬದಲಾಗುವ ಈ ರಸ್ತೆಯಲ್ಲಿ ಓಡಾಡೋಕೆ ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತೆ. ಮಳೆಗಾಲದಲ್ಲಿ ಕೆಸರುಮಯ ಆಗೋ ರಸ್ತೆ, ಬೇಸಿಗೆ ಕಾಲದಲ್ಲಿ ಕಂಪ್ಲೀಟ್ ಧೂಳುಮಯವಾಗಿ ಬಿಡುತ್ತೆ. ಹೀಗೆ ವರ್ಷವಿಡೀ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡು ಜನರು ನರಕಯಾತನೆ ಅನುಭವಿಸುತ್ತಲೇ ಇದ್ದಾರೆ. ನೂರಕ್ಕೂ ಹೆಚ್ಚು ಮನೆಗಳಿರೋ ಈ ಗ್ರಾಮದಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಶಾಲಾ ಕಾಲೇಜುಗಳಿಗೆ ತೆರಳಲು ಪರದಾಟ ನಡೆಸುವಂತಾಗಿದೆ. ಅಲ್ಲದೇ ಆನ್ ಲೈನ್ ಕ್ಲಾಸ್ ಗೆ ನೆಟ್ವರ್ಕ್ ಹುಡುಕಿಕೊಂಡು ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ಚಿಕ್ಕ ಚಿಕ್ಕ ಪುಟಾಣಿಗಳು ಹರಸಾಹಸ ಪಡುತ್ತಿದ್ದಾರೆ.
Advertisement
ವೃದ್ಧರು ಆಸ್ಪತ್ರೆಗೆ ತೆರಳಲು ಸಂಕಟ ಅನುಭವಿಸುತ್ತಿದ್ದಾರೆ. ಸದ್ಯ ಸಂಸೆಯಿಂದ ಮುಳ್ಳೋಡಿಗೆ ಸಂಪರ್ಕ ಕಲ್ಪಿಸುವ 7 ಕೀಮೀ ರಸ್ತೆ ಸಂಪೂರ್ಣ ಕೆಸರು ರಾಡಿಯಾಗಿದೆ. ಹೀಗೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಜನರು ಪರಿತಪಿಸುತ್ತಿದ್ರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಹದೆಗೆಟ್ಟ ರಸ್ತೆಗೆ ಉಸೇನ್ ಬೋಲ್ಟ್ ಭಾವಚಿತ್ರ ಜೋಡಿಸಿ ಜನಪ್ರತಿನಿಧಿಗಳು, ಅಧಿಕಾರಿಗಳ ಮಾನ-ಮರ್ಯಾದೆಯನ್ನ ಕಳೆದಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟವರು ಇತ್ತ ಗಮನಹರಿಸ್ತಾರ..? ಕಾಲವೇ ಉತ್ತರ ಕೊಡಬೇಕು.