ಭಾರತ-ಅಮೆರಿಕ ನಡುವಿನ ಸಂಬಂಧ ಹಳಸುತ್ತಿದೆಯೇ? ಇತ್ತೀಚೆಗಿನ ಕೆಲವೊಂದು ಬೆಳವಣಿಗೆಗಳು ಹೀಗೊಂದು ಪ್ರಶ್ನೆ ಉದ್ಭವಿಸುವಂತೆ ಮಾಡಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸ್ಪಷ್ಟ ಮತ್ತು ಅನಿಶ್ಚಿತ ವಿದೇಶಾಂಗ ನೀತಿಯಿಂದಾಗಿ ಭಾರತ ಮಾತ್ರವಲ್ಲದೆ ಜಗತ್ತಿನ ಬಹುತೇಕ ರಾಷ್ಟ್ರಗಳು ಗೊಂದಲದಲ್ಲಿವೆ. ವಿಸಾ ನೀಡಿಕೆ, ವಲಸೆ, ಆಮದು-ರಫ್ತು ವಹಿವಾಟು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಮೆರಿಕ ದಿನಕ್ಕೊಂದರಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದು ದೇಶಗಳನ್ನು ಗೊಂದಲಕ್ಕೆ ಕೆಡವುತ್ತಿದೆ. ಚೀನಾ, ರಶ್ಯಾ, ಭಾರತ ಸೇರಿದಂತೆ ವಿವಿಧ ದೇಶಗಳ ಜತೆಗೆ ಬಹಿರಂಗವಾಗಿಯೇ ವ್ಯಾಪಾರ ಯುದ್ಧ ಸಾರಿರುವ ಅಮೆರಿಕ ಈ ಮೂಲಕ ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ತೀವ್ರವಾದ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತಿದೆ. ಇದೀಗ ಇರಾನ್‌ನಿಂದ ಕಚ್ಚಾತೈಲ ಆಮದುಗೊಳಿಸುವ ದೇಶಗಳಿಗೆ ಅಮೆರಿಕ ನೀಡಿರುವ ಫರ್ಮಾನು ಹೊಸ ಅಂತರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಗಿದೆ.
ಆರ್ಥಿಕವಾಗಿ ಇರಾನ್‌ನನ್ನು ದುರ್ಬಲಗೊಳಿಸುವ ಸಲುವಾಗಿ ಟ್ರಂಪ್ ಆ ದೇಶದ ಮೇಲೆ ನ.4ರ ಬಳಿಕ ಹೊಸ ನಿರ್ಬಂಧಗಳನ್ನು ಹೇರಲುದ್ದೇಶಿಸಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಎಲ್ಲ ದೇಶಗಳು ಇರಾನ್‌ನ ಕಚ್ಚಾತೈಲ ಆಮದು ಸ್ಥಗಿತಗೊಳಿಸಬೇಕೆಂದು ಅಮೆರಿಕ ಫರ್ಮಾನು ಹೊರಡಿಸಿರುವುದು ಮಾತ್ರವಲ್ಲದೆ ಇದನ್ನು ಪಾಲಿಸದಿದ್ದರೆ ಆ ದೇಶಗಳ ಮೇಲೂ ಆರ್ಥಿಕ ದಿಗ್ಬಂಧನ ಹಾಕುವ ಎಚ್ಚರಿಕೆಯನ್ನೂ ನೀಡಿದ್ದಾರೆ ಹಾಗೂ ಹಿಂದಿನಂತೆ ಇದರಿಂದ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂದಿದ್ದಾರೆ. ಭಾರತ ಮತ್ತು ಚೀನ ಇರಾನ್‌ನ ಮುಖ್ಯ ಕಚ್ಚಾತೈಲ ಗ್ರಾಹಕರು. ಸೌದಿ ಅರೇಬಿಯಾ ಮತ್ತು ಇರಾಕ್ ಬಳಿಕ ಭಾರತಕ್ಕೆ ಅತಿ ಹೆಚ್ಚು ಕಚ್ಚಾತೈಲ ಪೂರೈಸುವುದು ಇರಾನ್. ಅಮೆರಿಕದ ಈ ಬೆದರಿಕೆಗಳಿಗೆ ಚೀನಾ ಹೆಚ್ಚು ತಲೆಕೆಡಿಸಿಕೊಳ್ಳುವ ಸಾಧ್ಯತೆಯಿಲ್ಲ. ಈಗಾಗಲೇ ಅಮೆರಿಕಕ್ಕೆ ಆ ದೇಶ ಬಹಿರಂಗವಾಗಿಯೇ ಸಡ್ಡು ಹೊಡೆದಿದೆ.
ಆದರೆ ಉಭಯ ಸಂಕಟವಾಗಿರುವುದು ನಮಗೆ. ಇರಾನ್‌ನಿಂದ ಕಚ್ಚಾತೈಲ ಆಮದನ್ನು ಶೂನ್ಯಕ್ಕಿಳಿಸಿದರೆ ಅದು ಬೀರುವ ಪರಿಣಾಮ ತೀವ್ರವಾಗಿರಬಹುದು. ಈಗಾಗಲೇ ಇಂಧನ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಮತ್ತು ಹಣದುಬ್ಬರದ ಸಮಸ್ಯೆಯಿಂದ ಬಳಲುತ್ತಿದ್ದು, ಈ ಸಂದರ್ಭದಲ್ಲಿ ಕಚ್ಚಾತೈಲ ಆಮದು ಕುಸಿತವಾದರೆ ಸಮಸ್ಯೆಗಳು ಉಲ್ಬಣಿಸ ಬಹುದು. ಇಂಧನ ಬೆಲೆ ನಿಯಂತ್ರಣ ಮೀರಿ ಹೆಚ್ಚಾಗಬಹುದು. ಈ ಅಪಾಯಗಳನ್ನು ಮೈಮೇಲೆಳೆದುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸುವ ಜಾಣ್ಮೆಯನ್ನು ಕೇಂದ್ರ ತೋರಿಸಬೇಕು. ಇರಾನ್ ಕಚ್ಚಾತೈಲ ಆಮದು ಸ್ಥಗಿತಗೊಳಿಸಲು ಅಮೆರಿಕ ನಮ್ಮನ್ನು ಒತ್ತಾಯಿಸುತ್ತಿರುವುದು ಇದೇ ಮೊದಲೇನಲ್ಲ. 2011ರಲ್ಲಿ ಇದೇ ಮಾದರಿಯ ಪರಿಸ್ಥಿತಿ ಉದ್ಭವಿಸಿದಾಗ ನಿತ್ಯದ ಕಚ್ಚಾತೈಲ ಆಮದನ್ನು 3,20,000 ಬ್ಯಾರಲ್‌ನಿಂದ 1,90,000 ಬ್ಯಾರಲ್‌ಗಿಳಿಸಲಾಗಿತ್ತು. ಇದರಿಂದ ಮಾರುಕಟ್ಟೆಯಲ್ಲಿ ಇಂಧನ ಅಭಾವ ತಲೆದೋರದಿದ್ದರೂ ಬೆಲೆ ತುಸು ಏರಿಕೆಯಾಗಿತ್ತು. 2015ರಲ್ಲಿ ಸಮಗ್ರ ಜಂಟಿ ಕ್ರಿಯಾ ಯೋಜನೆಗೆ ಅಂಕಿತ ಹಾಕಿದ ಬಳಿಕ ನಿಷೇಧ ಕೊನೆಗೊಂಡು ಪರಿಸ್ಥಿತಿ ಯಥಾಸ್ಥಿತಿಗೆ ಬಂದಿತ್ತು. ಆ ದಿನಗಳಲ್ಲಿ ಭಾರತ, ಚೀನ ಮತ್ತು ದಕ್ಷಿಣ ಕೊರಿಯಾಕ್ಕೆ ಅಮೆರಿಕ ಕೆಲವೊಂದು ವಿನಾಯಿತಿಗಳನ್ನೂ ನೀಡಿತ್ತು. ಆದರೆ ಈಗ ಟ್ರಂಪ್ ಆಡಳಿತ ಕಚ್ಚಾತೈಲ ಆಮದು ಶೂನ್ಯಕ್ಕಿಳಿಯಬೇಕೆಂದು ಪಟ್ಟು ಹಿಡಿದು ವಿನಾಯಿತಿ ನೀಡದಿರುವ ಕಠಿನ ನಿರ್ಧಾರ ಕೈಗೊಂಡಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೂ ಪರಿಣಾಮ ಬೀರಬಹುದು. ಭಾರತ ಮತ್ತು ಇರಾನ್ ಸಂಬಂಧ ತೈಲ ಆಮದಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದಿ ನಿಂದಲೂ ಈ ದೇಶದ ಜತೆಗೆ ನಾವು ಮಧುರ ಬಾಂಧವ್ಯವವನ್ನು ಹೊಂದಿದ್ದೇವೆ. ಅಲ್ಲದೆ ಈಗ ಚೀನ ರಣವ್ಯೂಹಕ್ಕೆ ವಿರುದ್ಧವಾಗಿ ಇರಾನ್‌ನ ಚಾಬಹರ್ ಬಂದರನ್ನು ಕೂಡಾ ಅಭಿವೃದ್ಧಿಪಡಿಸುತ್ತಿದ್ದೇವೆ. ಅಮೆರಿಕದ ನಿಷೇಧದ ಜತೆಗೆ ವ್ಯವಹರಿಸುವಾಗ ಈ ಎಲ್ಲ ಅಂಶಗಳ ಸಾಧಕ ಬಾಧಕಗಳನ್ನೂ ಪರಿಗಣಿಸಬೇಕಾಗುತ್ತದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನಾವು ವಿಶ್ವ ಸಂಸ್ಥೆಯ ನಿಷೇಧಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇವೆಯೇ ಹೊರತು ಯಾವುದೇ ದೇಶ ಏಕಪಕ್ಷೀಯವಾಗಿ ಘೋಷಿಸುವ ನಿಷೇಧಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬುದಾಗಿ ಅಮೆರಿಕಕ್ಕೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ. ಭಾರತವಾಗಲಿ, ಚೀನವಾಗಲಿ ಪ್ರತಿಯೊಂದು ದೇಶಕ್ಕೂ ತನ್ನ ಸಾರ್ವಭೌಮ ಹಕ್ಕು ಎಂಬುದೊಂದಿರುತ್ತದೆ.ಯಾವ ದೇಶದ ಜತೆಗೆ ಸಂಬಂಧ ಇಟ್ಟುಕೊಳ್ಳಬೇಕು, ಯಾವ ದೇಶದ ಜತೆಗೆ ವ್ಯಾಪಾರ ವಹಿವಾಟುಗಳನ್ನು ನಡೆಸಬೇಕೆಂಬುದೆಲ್ಲ ಈ ಸಾರ್ವಭೌಮ ಹಕ್ಕಿನಡಿ ಬರುತ್ತದೆ. ಈ ಹಕ್ಕನ್ನು ಅಮೆರಿಕ ನಿರ್ದೇಶಿಸುವಂತಿಲ್ಲ. ಹೇಗೆ ಟ್ರಂಪ್ ತನ್ನ ದೇಶದ ಹಿತಾಸಕ್ತಿಯನ್ನು ಕಾಯುವ ಸಲುವಾಗಿ ಅಮೆರಿಕ ಫಸ್ಟ್ ನೀತಿ ಅನುಸರಿಸುತ್ತಿದ್ದಾರೋ ಅದೇ ರೀತಿ ಉಳಿದ ದೇಶಗಳಿಗೂ ತಮ್ಮ ಹಿತಾಸಕ್ತಿಯನ್ನು ಅನುಕೂಲವಾಗುವ ದಾರಿಯನ್ನು ಅನುಸರಿಸುವ ಹಕ್ಕು ಇದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಅಮೆರಿಕದ ನಿಷೇಧದ ಜತೆಗೆ ವ್ಯವಹರಿಸುವ ಕಾರ್ಯತಂತ್ರವನ್ನು ಕೇಂದ್ರ ರೂಪಿಸಿಕೊಳ್ಳಬೇಕು.