ಬೀಜಿಂಗ್: ದಕ್ಷಿಣ ಚೀನ ಸಮುದ್ರದಲ್ಲಿ ಪಾರುಪತ್ಯ ಮೆರೆಯಲು ಪೈಪೋಟಿ ನಡೆಸುತ್ತಿರುವ ಅಮೆರಿಕ ಹಾಗೂ ಚೀನ ರಾಷ್ಟ್ರಗಳ ನಡುವೆ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದು ಚೀನ ಸೇನೆಯಡಿ ಕಾರ್ಯನಿರ್ವಹಿಸುವ “ಪೀಪಲ್ಸ್ ಲಿಬರೇಶನ್ ಆರ್ಮಿ ಅಕಾಡೆಮಿ ಆಫ್ ಮಿಲಿಟರಿ ಸೈನ್ಸ್’ ಸಂಸ್ಥೆಯ ಸಂಶೋಧಕ ಕವೊ ಯೆನ್‌ಝೊಂಗ್ ತಿಳಿಸಿದ್ದಾರೆ. ಚೀನ ಸೇನೆಯ ವಾರ್ಷಿಕ ಸಮಾ ರಂಭವೊಂದರಲ್ಲಿ ಅವರು ಹೀಗೆ ಹೇಳಿದ್ದಾರೆ.
ಈ ವರ್ಷ, ಅಮೆರಿಕದ ಯುದ್ಧ ನೌಕೆಗಳು ಹಾಗೂ ಯುದ್ಧ ವಿಮಾನಗಳು ಚೀನ ವಿರುದ್ಧ ಸುಮಾರು 2000 ಬಾರಿ ಗೂಢಚರ್ಯೆ ನಡೆಸಿವೆ. ಅಮೆರಿಕದ ಈ ನಡೆ ಎರಡೂ ದೇಶಗಳ ನಡುವಿನ ದ್ವೇಷಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಇದರಿಂದ ಮುಂದೊಂದು ದಿನ ಎರಡೂ ದೇಶಗಳ ನಡುವೆ ಯುದ್ಧದ ಸಂದರ್ಭವೂ ಏರ್ಪಡಬಹುದು ಎಂದು ಅವರು ಹೇಳಿದ್ದಾರೆ.
ದಕ್ಷಿಣ ಚೀನ ಸಮುದ್ರದಲ್ಲಿರುವ (ಎಸ್‌ಸಿಎಸ್) ಚೀನಕ್ಕೆ ಸೇರಿದ ದ್ವೀಪ ಗಳಲ್ಲಿಯೇ ಅಮೆರಿಕದಿಂದ ಹೆಚ್ಚು ಗೂಢಚರ್ಯೆಗಳು ನಡೆದಿವೆ. ಇಂಥ ನಡೆಗಳು ಚೀನದ ಸಾರ್ವಭೌಮತ್ವಕ್ಕೆ ಸವಾಲಾಗಿದ್ದು, ಪ್ರಾಂತೀಯ ಮಟ್ಟದಲ್ಲಿ ಆತಂಕಗಳನ್ನು ಸೃಷ್ಟಿ ಮಾಡುತ್ತದೆ. ಇಂಥ ನಡೆಗಳನ್ನು ಚೀನ ಸಾರಾಸಗಟಾಗಿ ತಳ್ಳಿಹಾಕುವುದರಿಂದ ಅಮೆರಿಕ- ಚೀನ ನಡುವೆ ಯುದ್ಧವಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಈ ರಾಜ್ಯದಲ್ಲಿ ಎಂಬಿಬಿಎಸ್ ಶುಲ್ಕ 4.5 ಲಕ್ಷ ರೂ.ನಿಂದ 1.5 ಲಕ್ಷಕ್ಕೆ ಇಳಿಕೆ
ಚೀನ ಸ್ಪಷ್ಟನೆ: ತಾನು ಇತ್ತೀಚೆಗೆ ಅಳವಡಿಸಿಕೊಂಡಿರುವ ಹೊಸ ಗಡಿ ರೇಖಾ ನೀತಿಯಿಂದ ಸದ್ಯಕ್ಕೆ ಚೀನ ತನ್ನ ಗಡಿಯನ್ನು ಹಂಚಿಕೊಂಡಿರುವ ಯಾವುದೇ ದೇಶಕ್ಕೆ ತೊಂದರೆಯಾಗು ವುದಿಲ್ಲ ಎಂದು ಚೀನ ಸ್ಪಷ್ಟಪಡಿಸಿದೆ. ಹೊಸ ಗಡಿ ನೀತಿಯ ಬಗ್ಗೆ ಭಾರತ ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಚೀನದಿಂದ ಈ ಸ್ಪಷ್ಟನೆ ಹೊರಬಿದ್ದಿದೆ.