ಡಲ್ಲಾಸ್: ಕಾಂಗ್ರೆಸ್ ಸಂಸದ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಇದೀಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಟೆಕ್ಸಾಸ್ ನ ಡಲ್ಲಾಸ್ ನಲ್ಲಿ (Dallas) ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದಲ್ಲಿ ಜನರು ನರೇಂದ್ರ ಮೋದಿಯವರ (Narendra Modi) ಮೇಲಿನ ಭಯವನ್ನು ಕಳೆದುಕೊಂಡಿದ್ದಾರೆ ಎಂದರು.
“ಭಾರತೀಯ ಜನತಾ ಪಕ್ಷದ ಬಗೆಗಿನ ಭಯ ಇದೀಗ ಇಲ್ಲ. ಬಿಜೆಪಿ ಮತ್ತು ಪ್ರಧಾನಿಯ ಬಗ್ಗೆ ಭಾರತದಲ್ಲಿ ಯಾರೂ ಭೀತಿ ಹೊಂದಿಲ್ಲ ಎನ್ನುವುದನ್ನು ನಾವು ಫಲಿತಾಂಶ ಬಂದ ನಿಮಿಷದೊಳಗೆ ತಿಳಿದುಕೊಂಡೆವು” ಎಂದು ರಾಹುಲ್ ಹೇಳಿದ್ದಾರೆ.
ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದುರ್ಬಲಗೊಳಿಸುವ ಸರ್ಕಾರದ ನಡೆಸಿದ ಪ್ರಯತ್ನಗಳ ವಿರುದ್ಧ ಭಾರತದ ಜನರು ನಿಂತರು. ನಮ್ಮ ಧರ್ಮದ ಮೇಲೆ, ನಮ್ಮ ದೇಶದ ಮೇಲಿನ ದಾಳಿಯನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಪ್ರತಿಪಾದಿಸಿದರು ಎಂದು ರಾಹುಲ್ ತನ್ನ ಭಾಷಣದಲ್ಲಿ ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅವರು ಬಿಜೆಪಿ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಮತ್ತು ತಮ್ಮ ಪಕ್ಷದ ನಡುವಿನ ಅಂತರದ ಬಗ್ಗೆ ಗಮನ ಸೆಳೆದರು. “ಭಾರತವು ಒಂದು ಕಲ್ಪನೆ ಎಂದು ಆರ್ಎಸ್ಎಸ್ ನಂಬುತ್ತದೆ, ಆದರೆ ಭಾರತವು ಅನೇಕ ವಿಚಾರಗಳೆಂದು ನಾವು ನಂಬುತ್ತೇವೆ ಎಂದು ರಾಹುಲ್ ಹೇಳಿದರು.
ತನ್ನ ದೃಷ್ಟಿಯ ಭಾರತದ ಬಗ್ಗೆ ಹೇಳಿದ ಅವರು, ಅದರಲ್ಲಿ ಯಾವುದೇ ಜಾತಿ, ಧರ್ಮ, ಭಾಷೆ ಮತ್ತು ಆಚರಣೆಯ ಎಲ್ಲಾ ಜನರ ಸಹಭಾಗಿತ್ವ ಇರುತ್ತದೆ ಎಂದರು.
“ಇದೇ ಹೋರಾಟ. ಭಾರತದ ಪ್ರಧಾನಿ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಭಾರತದಲ್ಲಿ ಲಕ್ಷಾಂತರ ಜನರು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿರುವುದು ಚುನಾವಣೆಯಲ್ಲಿ ಸ್ಪಷ್ಟವಾಗಿತ್ತು” ಎಂದು ಅವರು ಹೇಳಿದರು.
“ಅತ್ಯಂತ ಮುಖ್ಯವಾಗಿ, ಭಾರತದ ಸಂವಿಧಾನದ ಮೇಲೆ ದಾಳಿ ಮಾಡುವ ಯಾರಾದರೂ ನಮ್ಮ ಧಾರ್ಮಿಕ ಸಂಪ್ರದಾಯದ ಮೇಲೂ ದಾಳಿ ಮಾಡುತ್ತಿದ್ದಾರೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
“ಭಾರತವನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಗೌರವ ನೀಡಬೇಕು, ಕೇವಲ ಅತ್ಯಂತ ಶಕ್ತಿಶಾಲಿಗೆ ಮಾತ್ರವಲ್ಲ, ದುರ್ಬಲರಿಗೂ” ಎಂದು ರಾಹುಲ್ ಗಾಂಧಿ ಹೇಳಿದರು.