ವಾಷಿಂಗ್ಟನ್: ಭಾರತ ಮತ್ತು ಚೀನಾ ಸೇರಿದಂತೆ ಏಳು ದೇಶಗಳಿಗೆ ಇರಾನ್‌ನಿಂದ ತೈಲ ಆಮದು ವಿನಾಯಿತಿಯನ್ನು ಅಮೆರಿಕ ರದ್ದುಗೊಳಿಸಿದೆ. ಇರಾನ್ ಜೊತೆಗಿನ ಪರಮಾಣು ಒಪ್ಪಂದ ರದ್ದುಗೊಳಿಸಿದ ಅಮೆರಿಕ, ಇರಾನ್‌ನಿಂದ ಯಾವ ದೇಶವೂ ತೈಲ ಆಮದು ಮಾಡಿಕೊಳ್ಳಬಾರದು ಎಂದು ಷರತ್ತು ವಿಧಿಸಿತ್ತು. ಆದರೆ ಭಾರತ ಸೇರಿ 7 ದೇಶಗಳು ಇರಾನ್ ತೈಲವನ್ನೇ ಅವಲಂಬಿಸಿದ್ದುದರಿಂದ ವಿನಾಯಿತಿ ನೀಡಿತ್ತು. ಆದರೆ ಈಗ ಈ ವಿನಾಯಿತಿಯನ್ನು ಮುಂದುವರಿಸದಿರಲು ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
ಈ ಮಧ್ಯೆ ಅಮೆರಿಕದ ನಿರ್ಧಾರದಿಂದ ತೈಲ ಆಮದಿನಲ್ಲಿ ಉಂಟಾಗುವ ಕೊರತೆ ನೀಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಭಾರತ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಈಗಾಗಲೇ ಹೆಚ್ಚುವರಿ ಸಂಗ್ರಹವನ್ನು ನಾವು ಹೊಂದಿದ್ದೇವೆ. ಇಂಡಿಯನ್ ಆಯಿಲ್ ಸೇರಿದಂತೆ ಯಾವುದೇ ತೈಲ ಪೂರೈಕೆ ಕಂಪನಿಗಳಿಗೆ ತೈಲದ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ.
ಸೌದಿಯ ನೆರವು: ಇರಾನ್ ವಿರುದ್ಧದ ತೈಲ ನಿಷೇಧ ಜಾರಿಗೆ ಬಂದ ನಂತರ ನಾವು ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಕೊಳ್ಳಲು ಬದ್ಧವಾಗಿದ್ದೇವೆ ಎಂದು ಸೌದಿ ಅರೇಬಿಯಾದ ಸಚಿವ ಖಾಲಿದ್ ಅಲ್ ಫಲಿಹ್ ಹೇಳಿದ್ದಾರೆ. ಗ್ರಾಹಕರಿಗೆ ಅಗತ್ಯ ತೈಲ ಪೂರೈಕೆ ಮಾಡುವಂತೆ ಇತರ ತೈಲ ಉತ್ಪಾದಕ ದೇಶಗಳ ಜೊತೆಗೆ ಮಾತುಕತೆ ನಡೆಸಲಿದ್ದೇವೆ ಎಂದಿದ್ದಾರೆ.