Advertisement

ಲಡಾಖ್‌ನಲ್ಲಿ ಚೀನ ನಡೆ ಮೇಲೆ ಅಮೆರಿಕ ನಿಗಾ

08:27 AM Jun 03, 2020 | mahesh |

ವಾಷಿಂಗ್ಟನ್‌: ಭಾರತದ ಗಡಿಯಲ್ಲಿನ ಚೀನ ಸೇನೆಯ ತಂಟೆಗಳನ್ನು ಅಮೆರಿಕ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. “ಭಾರತದ ಎಲ್‌ಎಸಿಯ ಉತ್ತರ ಭಾಗದತ್ತ ಚೀನ ಹೆಚ್ಚು ಸೈನಿಕರನ್ನು ನಿಯೋಜಿಸಿದೆ. ಸರ್ವಾಧಿಕಾರಿ ಆಡಳಿತ ಮಾತ್ರ ಇಂಥ ವರ್ತನೆ ಪ್ರದರ್ಶಿಸುತ್ತದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ, ಚೀನಕ್ಕೆ ಚಾಟಿ ಬೀಸಿದ್ದಾರೆ. “ಭಾರತದ ಜತೆಗಿನ ಗಡಿಸಂಬಂಧ ಸ್ಥಿರವಾಗಿದೆ. ನಮ್ಮ ನಡುವೆ ಯಾರ ಮಧ್ಯಪ್ರವೇಶವೂ ಬೇಡ’ ಎಂದು ಚೀನ ಹೇಳಿಕೊಂಡ ಬೆನ್ನಲ್ಲೇ, ಅಮೆರಿಕ ಉನ್ನತ ಮಟ್ಟದ ಅಧಿಕಾರಿಗಳು, ಸಂಸದರು ಭಾರತದ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ.

Advertisement

“ವುಹಾನ್‌ನಲ್ಲಿ ಆರಂಭಗೊಂಡ ಕೋವಿಡ್ ಸೋಂಕಿನ ಬಗ್ಗೆ ಇಡೀ ವಿಶ್ವ ತಿರುಗಿಬಿದ್ದಿದೆ. ಕೊರೊನಾ ಬಿಕ್ಕಟನ್ನು ಮರೆಮಾಚಲು ಚೀನ ಈಗ ಗಡಿನಾಟಕ ಆಡುತ್ತಿದೆ. ಹಾಂಕಾಂಗ್‌ ಜನರ ಸ್ವಾತಂತ್ರ್ಯ ದಮನಕ್ಕೂ ಕೈಹಾಕಿದೆ’ ಎಂದು ಹೇಳಿದ್ದಾರೆ. “ಇವು ಚೀನದ ವರ್ತನೆಯ ಎರಡು ತುಣುಕುಗಳಷ್ಟೇ. ಬೌದ್ಧಿಕ ಆಸ್ತಿ ಕದಿಯುವುದು, ದಕ್ಷಿಣಾ ಚೀನ ಸಮುದ್ರದಲ್ಲಿ ಮಿಲಿಟರಿ ಶಕ್ತಿ ಹೆಚ್ಚಿಸುವ ಅದರ ಕುತಂತ್ರಗಳು ಇನ್ನೂ ಬೇಕಾ ದಷ್ಟಿವೆ. ಕಳೆದ 6 ತಿಂಗಳಿಂದ ಚೀನ ಮಿಲಿಟರಿ ವರ್ತನೆಗಳನ್ನು ನೋಡುತ್ತಲೇ ಬಂದಿದ್ದೇವೆ’ ಎಂದು ಕಿಡಿಕಾರಿದ್ದಾರೆ.

ನೆರೆ ರಾಷ್ಟ್ರವನ್ನು ಹೆದರಿಸುವಿರೇಕೆ?: ನೆರೆ ಹೊರೆಯ ದೇಶಗಳನ್ನು ಬೆದರಿಸುವ ಚೀನ ಬುದ್ಧಿಗೆ ಅಮೆರಿಕದ ಸಂಸದ ಈಲಿಯಟ್‌ ಎಂಗೆಲ್‌ ಛೀಮಾರಿ ಹಾಕಿದ್ದಾರೆ. “ಗಡಿ ಸಮಸ್ಯೆ ವಿಚಾರದಲ್ಲಿ ಚೀನ ಆಕ್ರಮಣಕಾರಿ ಬುದ್ಧಿ ಬಿಟ್ಟು, ರಾಜ ತಾಂತ್ರಿಕ ಹಾದಿಯಲ್ಲಿ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಕೊಂಚ ತಗ್ಗಿದ ಟೆನ್ಷನ್‌
ಲಡಾಖ್‌ ಗಡಿಯಲ್ಲಿ ಕಳೆದ 3 ವಾರಗಳಿಗೆ ಹೋಲಿಸಿದರೆ ಉದ್ವಿಗ್ನತೆ ಕೊಂಚ ತಗ್ಗಿದೆ. ಆದರೆ, ಗಲ್ವಾನ್‌ ನದಿಯ ತೀರದಲ್ಲಿ ಉಭಯ ರಾಷ್ಟ್ರಗಳ ಸೈನಿಕರು ಜಮಾವಣೆ ಆಗಿದ್ದರೂ ಯಾವುದೇ ಪ್ರಚೋದನೆಗಳು ಕಂಡುಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಗಡಿ ವಾತಾವರಣ ಸಹಜ ಸ್ಥಿತಿಗೆ ಮರಳಲು ಕೆಲವು ವಾರ ಅಥವಾ ತಿಂಗಳು ಕಾಲಾವಕಾಶ ಬೇಕಾಗಬ ಹುದು. ರಾಜತಾಂತ್ರಿಕ ಮಟ್ಟದಲ್ಲಿ ಗಡಿ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ರಾಷ್ಟ್ರಗಳ ಮುಖಂಡರು ಯತ್ನಿಸುತ್ತಿದ್ದಾರೆ. ಸಂಘರ್ಷದಿಂದ ಗಡಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವುದು ಸೈನಿಕರಿಗೂ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next