ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಮೆರಿಕದ ಪ್ರಜೆಗಳಿಗೆ ಕಾನೂನಾತ್ಮಕವಾಗಿ ಇದ್ದ ಗರ್ಭಪಾತದ ಹಕ್ಕುಗಳನ್ನು ಅಲ್ಲಿನ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
1973ರಲ್ಲಿ ರೋ ವರ್ಸಸ್ ವೇಡ್ ಎಂಬ ಪ್ರಕರಣದಲ್ಲಿ ಇದೇ ಸುಪ್ರೀಂ ಕೋರ್ಟ್ ನೀಡಿದ್ದ ಗರ್ಭಪಾತ ಮಾಡಿಸಿಕೊಳ್ಳುವುದು ಅಮೆರಿಕ ಮಹಿಳೆಯರ ಹಕ್ಕು ಎಂಬ ಐತಿಹಾಸಿಕ ತೀರ್ಪನ್ನು ಹೊಸ ತೀರ್ಪು ಅನೂರ್ಜಿತಗೊಳಿಸಿದೆ.
1973ರ ತೀರ್ಪು ಹೊರಬಿದ್ದಾಗಿನಿಂದ ಇಡೀ ಅಮೆರಿಕದಲ್ಲಿ “ಗರ್ಭಪಾತವನ್ನು ಹಕ್ಕಾಗಿ ಪರಿಗಣಿಸಬೇಕೇ, ಬೇಡವೇ’ ಎಂಬುದರ ಬಗ್ಗೆ ಸಾಮಾಜಿಕವಾಗಿ, ರಾಜಕೀಯವಾಗಿ ದೊಡ್ಡ ಮಟ್ಟದ ಚರ್ಚೆಗಳು, ವಿಚಾರ ಸಂಕಿರಣಗಳು ನಡೆದಿವೆ. ಈ ವಿಚಾರ ರಾಜಕೀಯ ಪಕ್ಷಗಳ ನಡುವಿನ ಬಿರುಸಿನ ವಾಕ್ಸಮರಕ್ಕೂ ಕಾರಣವಾಗಿದೆ. ಈಗ ಹೊರಬಿದ್ದಿರುವ ಸುಪ್ರೀಂ ಕೋರ್ಟ್ನ ತೀರ್ಪಿನಿಂದ ಅವೆಲ್ಲವಕ್ಕೂ ಈಗ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.