ವಾಷಿಂಗ್ಟನ್ : ಕಳೆದ ಫೆ.14ರಂದು ಕನಿಷ್ಠ 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ, ಪಾಕಿಸ್ಥಾನದ ಬಾಲಕೋಟ್ ನಲ್ಲಿನ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿರುವುದನ್ನು ಅಮೆರಿಕ ಬೆಂಬಲಿಸಿದೆ.
ಕಳೆದ ಮಂಗಳವಾರ ನಡೆದಿರುವ ಭಾರತದ ಈ ಬಾಂಬ್ ದಾಳಿಯಲ್ಲಿ 350ಕ್ಕೂ ಹೆಚ್ಚು ಉಗ್ರರು ಹತರಾಗಿದ್ದು ಅವರ ಪಂಚತಾರಾ ಸೌಕರ್ಯಗಳ ಬೃಹತ್ ತರಬೇತಿ ಘಟಕ ಸಂಪೂರ್ಣ ನಾಶವಾಗಿದೆ.
ಅಮೆರಿಕ ವಿದೇಶ ಸಚಿವ ಮೈಕ್ ಪಾಂಪಿಯೋ ಅವರು ಪಾಕ್ ಉಗ್ರ ಶಿಬಿರಗಳ ಮೇಲಿನ ಭಾರತದ ವೈಮಾನಿಕ ಬಾಂಬ್ ದಾಳಿಯ ನಿರ್ಧಾರವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರಿಗೆ ಹೇಳಿದ್ದಾರೆ.
ಭಾರತವನ್ನು ಗುರಿ ಇರಿಸಿ ದಾಳಿ ನಡೆಸುವ ಪಾಕ್ ಮೂಲದ ಉಗ್ರ ಸಂಘಟನೆಗಳನ್ನು ಬೆಂಬತ್ತಿ ಶಿಕ್ಷಿಸುವ ಸ್ವರಕ್ಷಣೆಯ ಹಕ್ಕು ಭಾರತಕ್ಕೆ ಇದೆ ಎಂಬುದನ್ನು ಅಮೆರಿಕ ಒಪ್ಪಿಕೊಳ್ಳುತ್ತದೆ ಮತ್ತು ಆ ಕಾರಣಕ್ಕೆ ಭಾರತವನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ಪಾಂಪಿಯೋ ಅವರು ದೋವಾಲ್‌ಗೆ ಹೇಳಿದ್ದಾರೆ.
ಇದೇ ವೇಳೆ ಅಮೆರಿಕ, ಭಾರತ ಮತ್ತು ಪಾಕಿಸ್ಥಾನ ತಮ್ಮೊಳಗಿನ ಉದ್ವಿಗ್ನತೆಯನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆ ಮೂಲಕ ಮುಂದಾಗಬೇಕು; ಉಭಯ ದೇಶಗಳನ್ನು ಇನ್ನಷ್ಟು ಮಿಲಿಟರಿ ಶಕ್ತಿ ಪ್ರದರ್ಶನಕ್ಕೆ ಮುಂದಾದರೆ ಪರಿಸ್ಥಿತಿ ಇನ್ನಷ್ಟು ಘೋರವಾಗಿ ಕೈಮೀರುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದೆ.