ಹೊಸದಿಲ್ಲಿ : ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಸಾಫ್ಟ್ ವೇರ್ ಕಳವು ಗೈದು ಹ್ಯಾಕರ್‌ಗಳು ನಡೆಸಿರುವ ಸೈಬರ್ ದಾಳಿಗೆ ವಿಶ್ವಾದ್ಯಂತದ ನೂರರಷ್ಟು ದೇಶಗಳು ಬಾಧಿತವಾಗಿದ್ದು ಈ ಪೈಕಿ 12ರಷ್ಟು ದೇಶಗಳು ತೀವ್ರವಾಗಿ ಬಾಧಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಸಾಫ್ಟ್ ವೇರ್ ಉತ್ಪಾದಿಸುವ ಅವಾಸ್ಟ್ ಸಂಸ್ಥೆಯ ಸಂಶೋಧಕರ ಪ್ರಕಾರ ರಶ್ಯ, ಯುಕ್ರೇನ್ ಮತ್ತು ತೈವಾನ್ ಟಾಪ್ ಟಾರ್ಗೆಟ್‌ಗಳಾಗಿದ್ದು ಇವು ಸೇರಿದಂತೆ 99 ದೇಶಗಳ 57,000 ಕಂಪ್ಯೂಟರ್‌ಗಳು ಹ್ಯಾಕರ್‌ಗಳ ಸೈಬರ್ ದಾಳಿಗೆ ಗುರಿಯಾಗಿವೆ.
ಇನ್‌ವಾಯ್‌ಸ್‌ಗಳು, ಜಾಬ್ ಆಫರ್‌ಗಳು, ಸೆಕ್ಯುರಿಟಿ ವಾರ್ನಿಂಗ್‌ಗಳು ಮತ್ತು ಇತರ ಕಾನೂನಾತ್ಮಕ ಕಡತಗಳನ್ನು ಒಳಗೊಂಡಿರುವಂತೆ ತೋರಿ ಬರುವ ಸ್ಪಾಮ್ ಇ-ಮೇಲ್‌ಗಳಿಗೆ ಜೋಡಿಸಲ್ಪಟ್ಟಿರುವ ಕಳ್ಳ ತಂತ್ರಾಂಶಗಳನ್ನು ತೆರೆಯುವಂತೆ ಪ್ರಚೋದಿಸುವ ಮೂಲಕ ಬಳಕೆದಾರರನ್ನು ಖೆಡ್ಡಾಗೆ ಬೀಳಿಸುವ ಹ್ಯಾಕರ್‌ಗಳು ಆ ಮೂಲಕ ಸೈಬರ್ ಸುಲಿಗೆ ತಂತ್ರವನ್ನು ಅನುಸರಿಸಿರುವುದಾಗಿ ನಂಬಲಾಗಿದೆ.
‘300 ರಿಂದ 600 ಡಾಲರ್ ಹಣ ತೆತ್ತರೆ ಮಾತ್ರವೇ ನಿಮಗೆ ನಿಮ್ಮ ಕಂಪ್ಯೂಟರ್ ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುವೆವು’ ಎಂದು ತಿಳಿಸುವ ಎನ್‌ಕ್ರಿಪ್‌ಟೆಡ್ ಡಾಟಾ ರಾನ್‌ಸಮ್‌ವೇರ್ ಹ್ಯಾಕ್ ಮಾಡಲ್ಪಟ್ಟ ಕಂಪ್ಯೂಟರ್ ಪರದೆಗಳ ಮೇಲೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.
ಭದ್ರತಾ ಸಂಶೋಧಕರು ಗಮನಿಸಿರುವ ಹಾಗೆ ಕೆಲವೊಂದು ಸಂತ್ರಸ್ತರು ಬಿಟ್‌ಕಾಯಿನ್ ಡಿಜಿಟಲ್ ಕರೆನ್ಸಿ ಮೂಲಕ ಸುಲಿಗೆ ಹಣವನ್ನು ಹ್ಯಾಕರ್‌ಗಳಿಗೆ ಪಾವತಿ ಮಾಡಿದ್ದಾರೆ; ಆದರೆ ಸೈಬರ್ ಸುಲಿಗೆಕೋರರಿಗೆ ತಾವು ನಿರ್ದಿಷ್ಟವಾಗಿ ಪಾವತಿಸಿರುವ ಶೇಕಡಾವಾರು ಹಣದ ಪ್ರಮಾಣ ಎಷ್ಟೆಂಬುದು ಆ ಅಮಾಯಕ ಬಳಕೆದಾರರಿಗೆ ಗೊತ್ತಿಲ್ಲ ಎಂದು ವರದಿಯಾಗಿದೆ.
ಹ್ಯಾಕರ್‌ಗಳ ದಾಳಿಗೆ ಗುರಿಯಾಗಿರುವುದು ಬ್ರಿಟನ್‌ನ ಅತ್ಯಧಿಕ ಕಂಪ್ಯೂಟರ್‌ಗಳು. ತಮ್ಮ ಕಂಪ್ಯೂಟರ್ ಜಾಲವನ್ನು ಪ್ರವೇಶಿಸಲು ಸಾಧ್ಯವಾಗದ ಬ್ರಿಟನ್‌ನ ಅಸಂಖ್ಯ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮಲ್ಲಿಗೆ ಬಂದ ಅನೇಕ ರೋಗಿಗಳನ್ನು ಹಿಂದೆ ಕಳುಹಿಸಿರುವುದಾಗಿ ವರದಿಯಾಗಿದೆ.
ಅಂತಾರಾಷ್ಟ್ರೀಯ ಸರಕು ಸಾಗಣೆಗಾ ಫೆಡೆಕ್ಸ್ ಹೇಳಿರುವ ಪ್ರಕಾರ ಅದರ ಕೆಲವು ವಿಂಡೋಸ್ ಕಂಪ್ಯೂಟರ್‌ಗಳು ಹ್ಯಾಕ್ ಆಗಿವೆ. ಇದನ್ನು ಸಾಧ್ಯವಿರುವಷ್ಟು ಬೇಗನೆ ಸರಿಪಡಿಸುವ ಕೆಲಸದಲ್ಲಿ ನಾವೀಗ ತೊಡಗಿಕೊಂಡಿದ್ದೇವೆ ಎಂದು ಅದು ಹೇಳಿದೆ.