ನ್ಯೂಯಾರ್ಕ್: ವಿಶ‍್ವದ ದೊಡ್ಡಣ್ಣನನ್ನೇ ಅಕ್ಷರಶಃ ನಲುಗಿಸಿರುವ ಕೋವಿಡ್-19ಗೆ ಕೇವಲ ಒಂದೇ ದಿನದಲ್ಲಿಅಂದಾಜು 2000 ಜನ ಮೃತರಾಗಿದ್ದಾರೆ. ಇದು ದೇಶದಲ್ಲಿ ಸತತ ಎರಡನೇ ಬಾರಿಗೆ ದಾಖಲಾದ ಅತೀ ದೊಡ್ಡ ಸಾವಿನ ಮೊತ್ತ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಈ ವರದಿ ಬೆಚ್ಚಿ ಬೀಳಿಸುವಂತಿದ್ದು, ವಿಶ್ವದಲ್ಲಿಯೇ ಒಂದೇ ದಿನ ಕೊರೊನಾಗೆ ಬಲಿಯಾದ ಅತಿ ಗರಿಷ್ಠ ಸಂಖ್ಯೆ ಇದಾಗಿದೆ. ಒಟ್ಟಾರೆ ಅಮೆರಿಕಾದಲ್ಲಿ ಮೃತರ ಪ್ರಮಾಣ 14 ಸಾವಿರದ ಗಡಿ ದಾಟಿದೆ. ಸ್ಪೇನ್ ನಲ್ಲಿ ಕೂಡ 14,500 ಜನರು ಈ ಮಾರಕ ವೈರಸ್ ಗೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ
ಇಟಲಿಯಲ್ಲಿ ಈ ವೈರಸ್ ನಿರಂತರವಾಗಿ ಮರಣ ಮೃದಂಗ ಬಾರಿಸುತ್ತಿದ್ದು ಅತೀ ಹೆಚ್ಚು ಬಲಿಯಾದವರ ಸಂಖ್ಯೆ ಈ ದೇಶದಲ್ಲೇ ಹೆಚ್ಚಿದೆ. ಇಲ್ಲಿಯವರೆಗೂ ಸುಮಾರು 17 ಸಾವಿರಕ್ಕಿಂತ ಹೆಚ್ಚು ಜನರು ಈ ಮಾರಕ ವೈರಸ್ ಗೆ ಕೊನೆಯುಸಿರೆಳೆದಿದ್ದಾರೆ ಒಂದೇ ದಿನದಲ್ಲಿ 1,973 ಜನರು ಬಲಿಯಾಗಿದ್ದು ದಾಖಲೆಯಾಗಿತ್ತು.
ಅಮೆರಿಕಾದಲ್ಲಿ 4 ಲಕ್ಷಕ್ಕಿಂತ ಹೆಚ್ಚು ಜನರು ಈ ಸೋಂಕಿಗೆ ತುತ್ತಾಗಿದ್ದಾರೆ. ನ್ಯೂಯಾರ್ಕ್ ನಗರದಲ್ಲೇ ಅತೀ ಹೆಚ್ಚು ಸಾವಿನ ಪ್ರಮಾಣ ದಾಖಲಾಗಿದ್ದು, ಒಟ್ಟಾರೆ 6000 ಮಂದಿ ಮೃತರಾಗಿದ್ದಾರೆ. ಮಾತ್ರವಲ್ಲದೆ ಇಲ್ಲಿ 1,38,000 ಜನರು ಸೋಂಕಿಗೆ ಒಳಗಾಗಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 779 ಜನರು ಪ್ರಾಣ ತ್ಯೆಜಿಸಿದ್ದಾರೆ. ನ್ಯೂಜೆರ್ಸಿ ಯಲ್ಲಿ ಕೂಡ 1500 ಜನರು ಬಲಿಯಾಗಿದ್ದು 48,000 ಜನರು ವೈರಾಣುವಿನಿಂದ ಬಳಲುತ್ತಿದ್ದಾರೆ.
ಜಗತ್ತಿನಾದ್ಯಂತ 1.5 ಮಿಲಿಯನ್ ಗಿಂತಲೂ ಹೆಚ್ಚು ಜನರು ವೈರಸ್ ಭಾಧಿತರಾಗಿದ್ದು, ಮೃತರ ಸಂಖ್ಯೆ 85,000 ಗಡಿ ದಾಟಿದೆ. ಆದರೆ 3,25,000 ಜನರು ಈ ವೈರಾಣುವಿನಿಂದ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕೂಡ ಕೋವಿಡ್ 19 ಭೀತಿ ದಿನೇ ದಿನೇ ಹೆಚ್ಚಾಗುತ್ತಿದ್ದು ಇಲ್ಲಿಯವರೆಗೂ 149 ಜನರು ಬಲಿಯಾಗಿದ್ದಾರೆ. ಮಾತ್ರವಲ್ಲದೆ 5,200 ಜನರು ಸೋಂಕು ಪೀಡಿತರಾಗಿದ್ದಾರೆ.