Advertisement
ವಿದೇಶಿಯರು ದೇಶಕ್ಕೆ ವಲಸೆ ಬರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಆದೇಶಕ್ಕೆ ಸಹಿ ಹಾಕುವುದಾಗಿ ತಿಳಿಸಿದ ಮರುದಿನವೇ ಅಧ್ಯಕ್ಷರ ಈ ಹೊಸ ನಿರ್ಧಾರ ಹೊರಬಿದ್ದಿದೆ. ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಫ್, ‘ಕೋವಿಡ್ ಸಂಕಷ್ಟದ ಸಮಯದಲ್ಲಿ ಅಮೆರಿಕನ್ ಪ್ರಜೆಗಳ ಉದ್ಯೋಗ ರಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಆದೇಶವು 60 ದಿನಗಳ ಕಾಲ ಜಾರಿಯಲ್ಲಿ ಇರುತ್ತದೆ. ಬಳಿಕ, ಇದನ್ನು ವಿಸ್ತರಿಸಬೇಕೇ, ಬೇಡವೆ ಎಂಬುದನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಈಗಿರುವ ಕಾನೂನಿನ ಪ್ರಕಾರ, ಅಮೆರಿಕ ಸರ್ಕಾರ ಪ್ರತಿವರ್ಷ, ಪ್ರತಿದೇಶಕ್ಕೆ ಶೇ.7ರ ಪ್ರಮಾಣದಲ್ಲಿ ಗರಿಷ್ಠ 1,40,000 ಉದ್ಯೋಗ ಆಧಾರಿತ ಹಸಿರು ಕಾರ್ಡ್‌ಗಳನ್ನು ನೀಡುತ್ತದೆ. ಭಾರತೀಯ ಐಟಿ ವೃತ್ತಿಪರರಲ್ಲಿ ಜನಪ್ರಿಯವಾಗಿರುವ ಎಚ್1-ಬಿ ವೀಸಾದ ರೀತಿಯಲ್ಲಿ ವಲಸೆ ರಹಿತ ವೀಸಾಗಳನ್ನು ಹೊಂದಿರುವ ವಿದೇಶಿಗರಿಗೆ ಇದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ಕೃಷಿ ಚಟುವಟಿಕೆಗಳಿಗೆ ಋತುಮಾನದ ವಲಸೆ ಕಾರ್ಮಿಕರ ಮೇಲೆ ಸಹ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ, ‘ಗ್ರೀನ್ ಕಾರ್ಡ್’ಗಾಗಿ ಅರ್ಜಿ ಹಾಕಿ, ಕಾನೂನುಬದ್ಧವಾಗಿ ಶಾಶ್ವತ ನಿವಾಸದ ಹಕ್ಕಿಗಾಗಿ ಕಾಯುತ್ತಿರುವ ಸಾವಿರಾರು ಭಾರತೀಯ ಅಮೆರಿಕದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಗ್ರೀನ್ ಕಾರ್ಡ್ ಸಿಗುವುದು ಮತ್ತಷ್ಟು ವಿಳಂಬವಾಗಲಿದೆ.