ವಾಷಿಂಗ್ಟನ್: ಚೀನದ ‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆಗೆ ಸಡ್ಡು ಹೊಡೆಯುವ ನಿಟ್ಟಿನಲ್ಲಿ ಅಮೆರಿಕದ ಟ್ರಂಪ್ ಆಡಳಿತ ದಕ್ಷಿಣ ಮತ್ತು ಆಗ್ನೇಯ ಏಷ್ಯಾಗೆ ಸಂಬಂಧಿಸಿದ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳ ರೂಪುರೇಷೆ ಸಿದ್ಧಪಡಿಸಿದೆ. ಈ ಯೋಜನೆಗಳು ಭಾರತದ ನೇತೃತ್ವದಲ್ಲಿ ನಡೆಯಲಿದ್ದು, ಈ ಮೂಲಕ ಎರಡು ದೇಶಗಳ ತೆರೆಮರೆಯ ಜಿದ್ದಿಗೆ ವೇದಿಕೆ ಕಲ್ಪಿಸಿದಂತಾಗಿದೆ.
2011ರಲ್ಲಿ ಚೆನ್ನೈಗೆ ಭೇಟಿ ನೀಡಿದ ವೇಳೆ, ಅಂದಿನ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಘೋಷಿಸಿದ್ದ ‘ನ್ಯೂ ಸಿಲ್ಕ್ ರೋಡ್’ ಮತ್ತು ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಪ್ರಾಂತ್ಯಗಳನ್ನು ಬೆಸೆಯುವ ‘ಇಂಡೋ – ಪೆಸಿಫಿಕ್ ಎಕನಾಮಿಕ್ ಕಾರಿಡಾರ್’ ಯೋಜನೆಗಳಿಗೆ ಟ್ರಂಪ್ ಆಡಳಿತ ಈಗ ಹೊಸ ರೂಪ ನೀಡಿದೆ. ಮಂಗಳವಾರ ನಡೆದ ವಿವಿಧ ಅಮೆರಿಕ ಆಡಳಿತದ ಮೊದಲ ವಾರ್ಷಿಕ ಬಜೆಟ್ ಸಭೆಯಲ್ಲಿ ಎರಡೂ ಯೋಜನೆಗಳ ರೂಪುರೇಷೆಗಳನ್ನು ಬಹಿರಂಗಪಡಿಸಿದ್ದು, ‘ನ್ಯೂ ಸಿಲ್ಕ್ ರೋಡ್’ (ಎನ್‌ಎಸ್‌ಆರ್) ಒಂದು ಸಾರ್ವಜನಿಕ – ಖಾಸಗಿ ಕಾರ್ಯಕ್ರಮವಾಗಿರಲಿದೆ. ಇಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ.
‘ನ್ಯೂ ಸಿಲ್ಕ್ ರೋಡ್’ ಯೋಜನೆಯು ಅಫ್ಘಾನಿಸ್ಥಾನದ ಮತ್ತು ಅದರ ನೆರೆ ರಾಷ್ಟ್ರಗಳ ಮೇಲೆ ಕೇಂದ್ರೀಕೃತವಾಗಿದ್ದು, ‘ಇಂಡೋ – ಪೆಸಿಫಿಕ್ ಎಕಾನಾಮಿಕ್ ಕಾರಿಡಾರ್’ ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಪ್ರಾಂತ್ಯಗಳನ್ನು ಬೆಸೆಯಲಿದೆ. ಈ ಯೋಜನೆಗಳಿಗೆ ಅಮೆರಿಕದ ಆಯವ್ಯಯದಲ್ಲಿ ಹಣ ಮೀಸಲಿಡಲು ಕೋರಲಾಗಿದೆ ಎಂದು ಅಲ್ಲಿನ ಆಡಳಿತ ತಿಳಿಸಿದೆ. ಸ್ಥಳೀಯ ಫಲಾನುಭವಿ ರಾಷ್ಟ್ರಗಳ ಸಹಕಾರ, ದ್ವಿಪಕ್ಷೀಯ ದಾನಿಗಳು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು ಮತ್ತು ಖಾಸಗಿ ವಲಯದಿಂದ ಯೋಜನೆಗೆ ಹಣ ಕ್ರೋಡೀಕರಿಸುವ ಉದ್ದೇಶ ಟ್ರಂಪ್ ಆಡಳಿತದ್ದಾಗಿದೆ.
‘ಅಫ್ಘಾನಿಸ್ಥಾನದ ಪ್ರಗತಿ ಅಥವಾ ಪರಿವರ್ತನೆ ಎನ್‌ಎಸ್‌ಆರ್ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು, ಅಫ್ಘಾನ್ ಪ್ರಜೆಗಳು ಸ್ವಾವಲಂಬಿಗಳಾಗಲು ಅಗತ್ಯವಿರುವ ನೆರವನ್ನು ಅಮೆರಿಕ ನೀಡಲಿದೆ. ಹಾಗೇ ಮಧ್ಯ ಏಷ್ಯಾದಲ್ಲಿ ವಾಣಿಜ್ಯ ಚಟುವಟಿಕೆಗಳ ಪ್ರಗತಿಗೆ ಇರುವ ಅಡೆತಡೆಗಳನ್ನು ತೊಡೆದುಹಾಕಿ ಈ ಭಾಗದ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ಹೊಸ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ’ ಎಂದು ವಿದೇಶಿ ಸಂಬಂಧಗಳ ಸಮಿತಿ ಸದಸ್ಯ ಜೇಮ್ಸ್ ಮ್ಯಾಕ್ ಬ್ರೈಡ್ ಹೇಳಿದ್ದಾರೆ.
Related Articles
ಚೀನ-ಪಾಕ್ ಕಾರಿಡಾರ್‌ಗೆ ವಿಶ್ವಸಂಸ್ಥೆ ಕಳವಳ
ಬೀಜಿಂಗ್: ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ 32 ಲಕ್ಷ ಕೋಟಿ ರೂ. ಅಂದಾಜು ವೆಚ್ಚದ ‘ಚೀನ-ಪಾಕಿಸ್ಥಾನ ಎಕಾನಾಮಿಕ್ ಕಾರಿಡಾರ್’ (ಸಿಪಿಇಸಿ) ಯೋಜನೆ ಭಾರತ ಮತ್ತು ಪಾಕಿಸ್ಥಾನ ನಡುವೆ ಉದ್ವಿಘ್ನ ಸ್ಥಿತಿ ನಿರ್ಮಾಣಕ್ಕೆ ಕಾರಣವಾಗಬಹುದು ಎಂದು ವಿಶ್ವ ಸಂಸ್ಥೆ ಹೇಳಿದೆ. ಪಿಒಕೆ ಮೂಲಕ ಹಾದುಹೋಗುವ ಸಿಪಿಇಸಿ, ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಭಾರತ – ಪಾಕ್ ನಡುವೆ ರಾಜಕೀಯ ಮತ್ತು ಭೌಗೋಳಿಕ ಉದ್ವಿಘ್ನತೆಗೆ ಕಾರಣವಾಗುವ ಸಾಧ್ಯತೆಗಳು ದಟ್ಟವಾಗಿವೆ. ಅಲ್ಲದೆ ಈ ಯೋಜನೆಯಿಂದ ಪಾಕ್‌ನ ಬಲೂಚಿಸ್ತಾನ ಪ್ರಾಂತ್ಯದಲ್ಲಿನ ಪ್ರತ್ಯೇಕತಾ ಆಂದೋಲನ ತೀವ್ರ ಸ್ವರೂಪ ಪಡೆಯಬಹುದು ಎಂದು ವಿಶ್ವ ಸಂಸ್ಥೆಯ ‘ಎಕಾನಾಮಿಕ್ ಆ್ಯಂಡ್ ಸೋಶಿಯಲ್ ಕಮೀಷನ್ ಫಾರ್ ಏಷ್ಯಾ ಆ್ಯಂಡ್ ಪೆಸಿಫಿಕ್’ ಹೇಳಿದೆ.