ವಾಷಿಂಗ್ಟನ್:ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹೈವೋಲ್ಟೆಜ್ ಆಗಿದ್ದು, ಪ್ರತಿ ಬಾರಿಯೂ ಅದರ ಫಲಿತಾಂಶದತ್ತ ಜಗತ್ತು ಕಾತರದಿಂದ ಕಾಯುತ್ತಿರುತ್ತದೆ. ಆದರೆ ಈ ಬಾರಿ ಟ್ರಂಪ್ ಪುನರಾಯ್ಕೆ ಬಯಸಿದ್ದಾರೆ. ಒಂದು ವೇಳೆ ಬೈಡೆನ್ ಗೆಲುವು ಸಾಧಿಸಿದರೆ. ಅಧಿಕಾರದಲ್ಲಿದ್ದ ಟ್ರಂಪ್ ಮರು ಚುನಾವಣೆಯಲ್ಲಿ ಸೋತ ಮೊದಲ ವ್ಯಕ್ತಿ ಎಂದು ಪರಿಗಣಿಸಬೇಕಾಗಿಲ್ಲ. ಕಳೆದ ಮೂರು ದಶಕಗಳ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿ ಸೋತ ಮೊದಲ ಅಧ್ಯಕ್ಷ ಟ್ರಂಪ್ ಆಗಲಿದ್ದಾರೆ.
1992ರಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಎಚ್ ಡಬ್ಲ್ಯು ಬುಶ್ ಅವರು ಮರುಚುನಾವಣೆಯಲ್ಲಿ ಪರಾಭವಗೊಂಡಿದ್ದು, ಡೆಮೋಕ್ರ್ಯಾಟ್ ಪಕ್ಷದ ಬಿಲ್ ಕ್ಲಿಂಟನ್ ಅಮೆರಿಕದ ಅಧ್ಯಕ್ಷಗಾದಿಗೆ ಏರಿದ್ದರು. ಬುಶ್ ಬಳಿಕ ನಡೆದ ಮೂರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯು ಬುಶ್(ಜ್ಯೂನಿಯರ್) ಮತ್ತು ಬರಾಕ್ ಒಬಾಮಾ ಅವರು ಮರುಚುನಾವಣೆಯಲ್ಲಿ ಗೆಲುವು ಸಾಧಿಸಿ ಜನಪ್ರಿಯತೆ ಗಳಿಸಿದ್ದರು.
ಅಮೆರಿಕದ ನೂರು ವರ್ಷಗಳಲ್ಲಿ ಮರುಚುನಾವಣೆಯಲ್ಲಿ ಪುನರಾಯ್ಕೆ ಬಯಸಿ ಪರಾಭವಗೊಂಡಿದ್ದು, ಕೇವಲ ನಾಲ್ಕು ಅಧ್ಯಕ್ಷರುಗಳು ಮಾತ್ರ ಎಂದು ವರದಿ ವಿವರಿಸಿದೆ.
ಜಾರ್ಜ್ ಡಬ್ಲ್ಯು ಬುಶ್:
1968ರಿಂದ ರಿಪಬ್ಲಿಕನ್ ಪಕ್ಷ ದೀರ್ಘಾವಧಿವರೆಗೆ ಅಮೆರಿಕದಲ್ಲಿ ಆಡಳಿತ ನಡೆಸಿದ್ದು, 1992ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಾರ್ಜ್ ಡಬ್ಲ್ಯು ಬುಶ್ ಪುನರಾಯ್ಕೆಯಾಗುತ್ತಾರೆಂದು ಊಹಿಸಲಾಗಿತ್ತು. ಶೇ.89ರಷ್ಟು ಅಮೆರಿಕನ್ ಮತದಾರರು ಎರಡನೇ ಬಾರಿಗೆ ಆಯ್ಕೆ ಮಾಡಲಿದ್ದಾರೆ ಎಂದು ಪರಿಗಣಿಸಲಾಗಿತ್ತು. ಆದರೆ ಬಿಲ್ ಕ್ಲಿಂಟನ್ ಅವರು ಶೇ.43ರಷ್ಟು ಮತ ಪಡೆದು 370 ಎಲೆಕ್ಟೋರಲ್ ಪ್ರತಿನಿಧಿಗಳ ಬೆಂಬಲದೊಂದಿಗೆ ಅಮೆರಿಕದ ಅಧ್ಯಕ್ಷಗಾದಿಗೆ ಏರಿದ್ದರು. ಬುಶ್ ಕೇವಲ ಶೇ.37ರಷ್ಟು ಮತ ಪಡೆದು 168 ಎಲೆಕ್ಟೋರಲ್ ಕಾಲೇಜ್ ಮತದೊಂದಿಗೆ ಪರಾಜಯಗೊಂಡು ಪುನರಾಯ್ಕೆಯಲ್ಲಿ ಸೋತು ಹೋಗಿದ್ದರು.
ಜಿಮ್ಮಿ ಕಾರ್ಟರ್:
ಡೆಮೋಕ್ರ್ಯಾಟಿಕ್ ಪಕ್ಷದ ಜಿಮ್ಮಿ ಕಾರ್ಟರ್ ಅವರು 1980ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿದ್ದರು. ಆದರೆ ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೇಗನ್ ಅವರು ಶೇ.50.7ರಷ್ಟು ಮತ ಪಡೆಯುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ್ದರು. ಇದರೊಂದಿಗೆ ಗೆಲವು ಸಾಧಿಸಿದ 69 ವರ್ಷದ ಮೊದಲ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರೇಗನ್ ಪಾತ್ರರಾಗಿದ್ದರು, ನಂತರ 2016ರಲ್ಲಿ 70ವರ್ಷದ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.
ಗೆರಾಲ್ಡ್ ಫೋರ್ಡ್:
ಗೆರಾಲ್ಡ್ ಫೋರ್ಡ್ 1973ರಿಂದ 1974ರವರೆಗೆ ಗೆರಾಲ್ಡ್ ಫೋರ್ಡ್ ಅವರು ಅಮೆರಿಕದ ಉಪಾಧ್ಯಕ್ಷರಾಗಿದ್ದರು. ಅಂದು ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರು ವಾಟರ್ ಗೇಟ್ ಹಗರಣದಿಂದಾಗಿ 1974ರಲ್ಲಿ ಅಧ್ಯಕ್ಷಗಾದಿಗೆ ರಾಜೀನಾಮೆ ಕೊಟ್ಟಿದ್ದರು. ಉಪಾಧ್ಯಕ್ಷರಾಗಿದ್ದ ಫೋರ್ಡ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. 1975ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಗೆರಾಲ್ಡ್ ಫೋರ್ಡ್ ಅವರನ್ನು ಡೆಮೋಕ್ರ್ಯಾಟಿಕ್ ಅಭ್ಯರ್ಥಿ ಜಿಮ್ಮಿ ಕಾರ್ಟರ್ ಅವರು ಪರಾಜಯಗೊಳಿಸಿದ್ದರು. ಅಮೆರಿಕದ ಚುನಾವಣಾ ಇತಿಹಾಸದಲ್ಲಿ ಚುನಾವಣೆಗೆ ಸ್ಪರ್ಧಿಸದೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪಡೆದ ಏಕೈಕ ವ್ಯಕ್ತಿ ಫೋರ್ಡ್!
ಹರ್ಬೆರ್ಟ್ ಕ್ಲಾರ್ಕ್ ಹೂವರ್:
ಅಮೆರಿಕದ ರಾಜಕಾರಣಿ, ಉದ್ಯಮಿ, ಇಂಜಿನಿಯರ್ ಹರ್ಬೆರ್ಟ್ ಹೂವರ್ 1929ರಿಂದ 1932ರವರೆಗೆ ಅಮೆರಿಕದ ಅಧ್ಯಕ್ಷರಾಗಿದ್ದರು. ಆದರೆ 1932ರಲ್ಲಿ ಸಂಭವಿಸಿದ ಮಹಾ ಆರ್ಥಿಕ ಹಿಂಜರಿತದ ಪರಿಣಾಮವಾಗಿ 1932ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹರ್ಬೆಟ್ ಹೂವರ್ ಅವರನ್ನು ಡೆಮೋಕ್ರ್ಯಾಟಿಕ್ ಪಕ್ಷದ ಫ್ರಾಂಕ್ಲಿನ್ ಡಿ ರೂಸ್ವೆಲ್ಸ್ ಪರಾಜಯಗೊಳಿಸಿದ್ದರು.
ಇದೀಗ 2020ನೇ ಸಾಲಿನ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬೈಡೆನ್ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ ಇನ್ನೂ ನಾಲ್ಕು ರಾಜ್ಯಗಳ ಮತಎಣಿಕೆ ನಡೆಯಲು ಬಾಕಿ ಇದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಪುನರಾಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. ಆದರೆ ಕೋವಿಡ್ 19 ಸೋಂಕಿನ ಹೊಡೆತ, ನಿರುದ್ಯೋಗ ಸಮಸ್ಯೆ, ವಲಸೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಕೊಟ್ಟಿಲ್ಲ ಎಂಬ ಆರೋಪ ಎದುರಿಸುತ್ತಿದ್ದು, ಜೋ ಬೈಡೆನ್ ಎಂಟು ವರ್ಷಗಳ ಕಾಲ ಉಪಾಧ್ಯಕ್ಷರಾಗಿದ್ದವರು. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೆಚ್ಚು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.