1990ರ ದಶಕದಲ್ಲಿ ತೆರೆಕಂಡ ರಂಗೀಲಾ ಚಿತ್ರದಲ್ಲಿ ಬಾಲಿವುಡ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ನಟಿ ಊರ್ಮಿಳಾ ಮಾತೋಂಡ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದ ಹಾಗೆ, ಈ ಬಾರಿ ಊರ್ಮಿಳಾ ಸಿನಿಮಾದ ಮೂಲಕ ಸುದ್ದಿಯಾಗುತ್ತಿಲ್ಲ. ಬದಲಾಗಿ ರಾಜಕೀಯದ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನದೇ ಆದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ, ತದನಂತರ ಕೆಲಕಾಲ ತೆರೆಯಿಂದ ದೂರವುಳಿದಿದ್ದ ನಟಿ ಊರ್ಮಿಳಾ ಮಾತೋಂಡ್ಕರ್ ಈಗ ರಾಜಕೀಯ ಅಂಗಳಕ್ಕೆ ಧುಮುಕಿದ್ದಾರೆ.
ಸದ್ಯ ಲೋಕಸಭಾ ಚುನಾವಣೆಯ ಕಾವು ದೇಶದಾದ್ಯಂತ ಜೋರಾಗುತ್ತಿ ರುವಂತೆ ಸಕ್ರಿಯ ರಾಜಕಾರಣದತ್ತ ಮುಖ ಮಾಡಿರುವ ಊರ್ಮಿಳಾ, ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಇನ್ನು ಊರ್ಮಿಳಾ ಮಾತೋಂಡ್ಕರ್ ಎಂಬ ಹಾಟ್ ಚೆಲುವೆಯನ್ನು ಅದ್ದೂರಿಯಾಗಿ ಸ್ವಾಗತಿಸಿರುವ ಕಾಂಗ್ರೆಸ್ ಕೂಡ ಊರ್ಮಿಳಾಗೆ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿ, ಮುಂಬೈ ಉತ್ತರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಇನ್ನು ರಾಜಕಾರಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಊರ್ಮಿಳಾ, “ನಾನು ಸಕ್ರಿಯ ರಾಜಕಾರಣಕ್ಕೆ ಮೊದಲ ಹೆಜ್ಜೆ ಇರಿಸಿದ್ದೇನೆ. ಸರ್ದಾರ್ ವಲ್ಲಭಬಾಯಿ ಪಟೇಲ…, ಮಹಾತ್ಮ ಗಾಂಧಿ, ನೆಹರು ಐಡಿಯಾಲಜಿಗಳನ್ನು ನಮ್ಮ ಕುಟುಂಬ ಪಾಲಿಸುತ್ತ ಬಂದಿದೆ. ನನ್ನನ್ನೂ ಹಾಗೆ ಬೆಳೆಸುತ್ತ ಬಂದಿದೆ. ನನ್ನ ರಾಜಕೀಯ ದೃಷ್ಟಿಕೋನವೂ ಹಾಗೆಯೇ ಬೆಳೆದಿದೆ. ನನಗೆ ಚಿಕ್ಕಂದಿನಿಂದಲೂ ಸಾಮಾಜಿಕ ಕಳಕಳಿ ಇತ್ತು. ಆಕಸ್ಮಿಕವಾಗಿ ಸಿನಿಮಾ ಕ್ಷೇತ್ರಕ್ಕೆ ಬಂದೆ. ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ರಾಜಕೀಯದಲ್ಲಿರುತ್ತಿದ್ದೆ. ಅಂತೂ ಅಂತಿಮವಾಗಿ ಕಾಂಗ್ರೆಸ್ ಮೂಲಕ ರಾಜಕೀಯ ಬದುಕು ಆರಂಭಿಸಿದ್ದೇನೆ. ಸಿನಿಮಾದಂತೆ, ಇಲ್ಲೂ ಜನರ ಪ್ರೀತಿ ಆಶೀರ್ವಾದ ಸಿಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ.
ಇನ್ನು ಮುಂಬೈ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಊರ್ಮಿಳಾ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಗೋಪಾಲ್ ಶೆಟ್ಟಿಯವರನ್ನು ಎದುರಿಸುತ್ತಿದ್ದು, ಊರ್ಮಿಳಾಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳಾ? ಅನ್ನೋದು ಚುನಾವಣಾ ಫಲಿತಾಂಶ ಬಂದ ಬಳಿಕವಷ್ಟೇ ಗೊತ್ತಾಗಲಿದೆ.
ಅದೇನೇ ಇರಲಿ, ಚಿತ್ರರಂಗದಲ್ಲಿ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ತಾರೆಯರ ಚಿತ್ತ ರಾಜಕೀಯದತ್ತ ಹೊರಳುತ್ತದೆ ಎಂಬ ಮಾತಿಗೆ ಈಗ ಊರ್ಮಿಳಾ ರಾಜಕೀಯ ಸೇರ್ಪಡೆ ಇನ್ನಷ್ಟು ಇಂಬು ನೀಡುತ್ತಿದ್ದು, ಊರ್ಮಿಳಾ ಸೆಕೆಂಡ್ ಇನ್ನಿಂಗ್ಸ್ ಹೇಗಿರಲಿದೆ ಅನ್ನೋದನ್ನ ಅನೇಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.