Advertisement
ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ “ಉರಿಗೌಡ- ನಂಜೇಗೌಡ’ ಮಹಾದ್ವಾರವನ್ನು ಸ್ಥಾಪಿಸಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ “ಒಕ್ಕಲಿಗ ಕುಲಕ್ಕೆ ಅವಮಾನ ಮಾಡಲಾಗಿದೆ’ ಎಂದು ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.ಆದರೆ ಇದ್ಯಾವುದಕ್ಕೂ ಬಗ್ಗದ ಬಿಜೆಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಉರಿಗೌಡ-ನಂಜೇಗೌಡ ಅವರ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಈಗ ಭಾರಿ ವಿವಾದ ಸೃಷ್ಟಿಸಿದೆ. ತೋಟಗಾರಿಕಾ ಸಚಿವ ಮುನಿರತ್ನ ಈ ಸಿನಿಮಾ ನಿರ್ಮಾಣಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
Related Articles
ಕುತೂಹಲಕಾರಿ ಸಂಗತಿ ಎಂದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದುವರೆಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಅವರ ಟ್ವೀಟರ್ ಖಾತೆಯಲ್ಲೂ ಈ ಬಗ್ಗೆ ಕಿಡಿಹೊತ್ತಿಸಿಲ್ಲ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಒಕ್ಕಲಿಗ ನಾಯಕರ ಮಧ್ಯೆಯೇ ಈ ವಿವಾದ ತಿರುಗಣಿಯಾಡುತ್ತಿದೆ.
Advertisement
ಕುಮಾರಸ್ವಾಮಿ ಆತಂಕಕ್ಕೆ ಕಾರಣವೇನು ?ಉರಿಗೌಡ ಹಾಗೂ ನಂಜೇಗೌಡ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈಗ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಎರಡು ವ್ಯಕ್ತಿಗಳ ವಿಚಾರ ಒಕ್ಕಲಿಗ ಸಮುದಾಯದಲ್ಲಿ ಒಂದು ಹಂತದ “ಅಸ್ಮಿತೆ’ಯ ಅಲೆ ಹುಟ್ಟಿ ಹಾಕಿದಂತೂ ಸುಳ್ಳಲ್ಲ. ಇದು ಬಲವಾಗಿಬಿಟ್ಟರೆ ಬಿಜೆಪಿಗೆ ರಾಜಕೀಯ ಲಾಭ ತಂದುಕೊಡಬಹುದೆಂಬ ಆತಂಕ ಒಂದೆಡೆ. ಇನ್ನೊಂದೆಡೆ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಸಾರಾಸಗಟಾಗಿ ಬೀಳದಂತೆ ತಡೆಯಲು ನಡೆಸುತ್ತಿರುವ ಹೋರಾಟಕ್ಕೂ ಇದು ಅಡ್ಡಿಯುಂಟು ಮಾಡುತ್ತಿದೆ. ಟಿಪ್ಪು ಕೊಂದವರ ವೈಭವೀಕರಣ ನಡೆವಾಗ ಕುಮಾರಸ್ವಾಮಿ ಮೌನಕ್ಕೆ ಶರಣಾದರೆಂಬ ಆರೋಪ ಎದುರಾಗಬಹುದೆಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿ ಕುಮಾರಸ್ವಾಮಿ ಇದೊಂದು ಕಾಲ್ಪನಿಕ ಪಾತ್ರಗಳು ಎಂದು ಪ್ರತಿಪಾದಿಸುತ್ತಿದ್ದಾರೆ.