Advertisement

ಬರಗೂರು ಪಠ್ಯವನ್ನೇ ಮುಂದುವರಿಸಲು ಆಗ್ರಹ

06:06 PM Jun 19, 2022 | Team Udayavani |

ರಾಯಚೂರು: ರಾಜ್ಯ ಸರ್ಕಾರ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಿಸಿದ ಪಠ್ಯ-ಪುಸ್ತಕ ಕೈ ಬಿಟ್ಟು ಹಿಂದಿನ ಡಾ| ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯವನ್ನೇ ಮುಂದುವರಿಸುವಂತೆ ಆಗ್ರಹಿಸಿ ಶನಿವಾರ ದಲಿತ, ಹಿಂದುಳಿದ, ಪ್ರಗತಿಪರ ಸಂಘಟನೆಗಳು ಹಾಗೂ ಕಸಾಪ, ದಲಿತ ಸಾಹಿತ್ಯ ಪರಿಷತ್‌ ಸದಸ್ಯರು ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಉದ್ಯಾನದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ರೋಹಿತ್‌ ಚಕ್ರತೀರ್ಥ ಅವರು ಬಲಪಂಥೀಯ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಿದ್ದಾರೆ. ಹೆಚ್ಚೇನು ಅಧ್ಯಯನ ಇಲ್ಲದ, ಶಿಕ್ಷಣ ತಜ್ಞರಲ್ಲದ ಚಕ್ರತೀರ್ಥ ಅವರ ನೇತೃತ್ವದಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ರಚಿಸಿರುವ ನಿರ್ಧಾರವೇ ಖಂಡನೀಯ. ಸ್ವಾತಂತ್ರ್ಯದ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿದೆ. 2014ರಲ್ಲಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯ ಪರಿಷ್ಕರಣ ಸಮಿತಿ ಕನ್ನಡ ಸಾಹಿತ್ಯಕ್ಕೆ, ಸಾಹಿತಿಗಳ ಪರಿಚಯವನ್ನು ಪಠ್ಯದಲ್ಲಿ ಸೇರಿಸಿತ್ತು. ಕನ್ನಡ ಭಾಷೆಗೆ ಅದರಲ್ಲೂ ದೊಡ್ಡ ದೊಡ್ಡ ಸಾಹಿತಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪಠ್ಯ ರಚಿಸಲಾಗಿತ್ತು ಎಂದು ವಿವರಿಸಿದರು.

ಕುವೆಂಪು ರಚಿಸಿದ ನಾಡಗೀತೆಯನ್ನು ಅವಹೇಳನ ಮಾಡಿ ಬರೆದಿದ್ದು, ವಿಶ್ವಗುರು ಬಸವಣ್ಣ, ಸ್ವಾಮಿ ವಿವೇಕಾನಂದ, ಮಹಾತ್ಮ ಜ್ಯೋತಿ ಬಾಪುಲೆ, ಸಾವಿತ್ರಬಾಯಿ ಪುಲೆ, ಪೆರಿಯಾರ್‌ ರಾಮಸ್ವಾಮಿ ನಾಯ್ಕರ್‌, ನಾರಾಯಣಗುರು ಅಂಥವರ ಜೀವನ ಚರಿತ್ರೆಯ ಪಾಠವನ್ನು ಮರುಪರಿಷ್ಕರಣೆ ನೆಪದಲ್ಲಿ ವಾಸ್ತವ ಮರೆಮಾಚಿ ಬರೆದು ಅವಮಾನ ಮಾಡಿರುವುದು ಖಂಡನೀಯ ಎಂದರು.

ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್‌ ಅಳ್ಳುಂಡಿ, ವಿವಿಧ ಸಂಘಟನೆಗಳ ಮುಖಂಡರಾದ ಜಿ.ಅಮರೇಶ, ಎಸ್‌.ಮಾರೆಪ್ಪ ವಕೀಲ, ಖಾಜಾ ಅಸ್ಲಾಂ ಅಹ್ಮದ್‌, ವೀರಹನುಮಾನ, ಎಂ.ಆರ್‌ ಬೇರಿ, ತಾಯಪ್ಪ ಹೊಸೂರು, ಮಾರೆಪ್ಪ ಹರವಿ, ಚನ್ನಬಸವ ಜಾನೇಕಲ್‌ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next