Advertisement

ಕುಡಿಯುವ ನೀರು ಪೂರೈಸಲು ಆಗ್ರಹ

07:59 PM Oct 23, 2020 | Suhan S |

ಹರಪನಹಳ್ಳಿ: ಮತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮತ್ತಿಹಳ್ಳಿ, ಎನ್‌.ಶಿರನಹಳ್ಳಿ, ಆಲದಹಳ್ಳಿ, ಹಗರಿಶೀರನಹಳ್ಳಿ ಮತ್ತು ಪುಣ್ಯ ನಗರ ಗ್ರಾಮಗಳಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗ್ರಾಮಸ್ಥರು ಖಾಲಿ ಕೊಡಪಾನದೊಂದಿಗೆ ಗುರುವಾರ ಮತ್ತಿಹಳ್ಳಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಮತ್ತಿಹಳ್ಳಿ ಗ್ರಾಮದ ಜನಸಂಖ್ಯೆ ಸುಮಾರು 6-8 ಸಾವಿರ ಜನಸಂಖ್ಯೆ ಹೊಂದಿದ್ದು, ಸದರಿ ಗ್ರಾಮದಲ್ಲಿ 10 ಬೋರ್‌ವೆಲ್‌ಗ‌ಳಿದ್ದು, ಇವುಗಳಲ್ಲಿ ಕೇವಲ 4 ಬೋರ್‌ವೆಲ್‌ಗ‌ಳಿಗೆ ಮಾತ್ರ ನೀರು ಬರುತ್ತಿದೆ. ಉಳಿದ 6 ಬೋರ್‌ ವೆಲ್‌ ಗಳು ಕಳೆದ ಎರಡು ತಿಂಗಳಿಂದ ಕೆಟ್ಟು ನಿಂತಿವೆ. ಈ ಕುರಿತು ತಾಪಂ ಇಒ, ಪಿಡಿಒ ಮತ್ತು ಆಡಳಿತ ಅಧಿಕಾರಿಗಳನ್ನು ಕುಡಿಯುವ ನೀರು ಕೊಡಿ ಎಂದು ಕೇಳಿದರೆ ಪಂಚಾಯಿತಿಯ ಹದಿನಾಲ್ಕನೇ ಹಣಕಾಸು ಯೋಜನೆಯ ಅಕೌಂಟ್‌ ಜಿಪಂ ಅಧಿಕಾರಿಗಳು ಲಾಕ್‌ ಮಾಡಿದ್ದಾರೆ.  ಹೀಗಾಗಿ ನಮಗೆ ಮೋಟಾರ್‌ ಪಂಪ್‌ ದುರಸ್ತಿಗೆ ಹಣವಿಲ್ಲ ಎಂದು ಉತ್ತರಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತ್ತಿಹಳ್ಳಿ ಗ್ರಾಪಂನ ಸುಮಾರು ಹತ್ತು ಸಾವಿರ ಜನರಿಗೆ ಕುಡಿಯುವ ನೀರು ಸೇರಿದಂತೆ ಸ್ವಚ್ಛತೆ, ಬೀದಿ ದೀಪ, ನಿರ್ವಹಣೆ ಮತ್ತು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ. ಕಳೆದ ಎರಡು ತಿಂಗಳಿಂದ ಗ್ರಾಪಂ, ತಾಪಂ ಮತ್ತು ಜಿಪಂಗೆ ಆಲೆದು ಅಲೆದು ಸುಸ್ತಾಗಿದೆ. ಹೀಗಾಗಿ ನೀರು ತರುವ ಬಂಡಿ ಹಾಗೂ ಖಾಲಿ ಕೊಡಪಾನಗಳೊಂದಿಗೆ ಪಂಚಾತಿಯಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದೇವೆ ಎಂದರು.

ಚೆನ್ನಮ್ಮ ರಾಮಣ್ಣ, ಮೈದೂರು ರಾಮಣ್ಣ, ಡಿ.ಶೇಖರಪ್ಪ, ಎಂ.ಕೋಟ್ಯಪ್ಪ, ಮರಳುಸಿದ್ದಪ್ಪ, ಸಿದ್ದಪ್ಪ, ಚಂದ್ರೇಗೌಡ, ಕೋಟ್ರೇಶ, ಯರಿತಾತ, ನಿಂಗಜ್ಜ, ಶಿವಣ್ಣ, ಕರಿಯವ್ವ, ಬಸಮ್ಮ, ಕೆ.ಸಿದ್ದಪ್ಪ, ಬಸವರಾಜ, ಕೆ.ಶಿವಕುಮಾರ್‌, ಕೊಟ್ರೇಶ್‌, ಕೊಟ್ರಪ್ಪ, ಕೆಂಚಪ್ಪ, ಹಾಲಪ್ಪ, ಮರಿಯಪ್ಪ ಇತರರು ಭಾಗವಹಿಸಿದ್ದರು

ಬನ್ನಿ ಉತ್ಸವ ಸರಳವಾಗಿ ಆಚರಿಸಿ :

Advertisement

ಹರಪನಹಳ್ಳಿ: ಅಪಾರ ಜನಸಂಖ್ಯೆ ಭಕ್ತರನ್ನು ಹೊಂದಿರುವ ಉಚ್ಚೆಂಗೆ ಮ್ಮದೇವಿಗೆ ದಸರಾ ಹಬ್ಬದ ಅಂಗವಾಗಿ ನಡೆಯುವ ಬನ್ನಿ ಉತ್ಸವವನ್ನು ಕೋವಿಡ್ ನಿಯಮದಡಿ ಸರಳವಾಗಿ ಆಚರಿಸಬೇಕು ಎಂದು ತಹಶೀಲ್ದಾರ್‌ ಡಿ.ಅನಿಲಕುಮಾರ್‌ ಹೇಳಿದರು.

ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಸರಾ ಹಬ್ಬ ಪ್ರತಿ ವರ್ಷ ವಿಜೃಂಭಣೆಯಿಂದ ವಿವಿಧ ವಾದ್ಯಗಳ ಮೂಲಕ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಬನ್ನಿ ಮಂಟಪದವರೆಗೂ ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಸಾವಿರಾರು ಜನರ ಸಮ್ಮುಖದಲ್ಲಿ ಬನ್ನಿ ಉತ್ಸವ ನಡೆಯುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ನಿಯಮದಂತೆ ಬನ್ನಿ ಉತ್ಸವದಲ್ಲಿ 100 ಜನರೂ ಮಾತ್ರ ಭಾಗವಹಿಸಬೇಕು ಎಂದರು.

ಬನ್ನಿ ಉತ್ಸವದಲ್ಲಿ 100 ಜನರಿಗೆ ಮಾತ್ರ ಅವಕಾಶವಿದ್ದು, ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಹಾಕಿಕೊಂಡು, ದೈಹಿಕ ಅಂತರ ಕಾಪಾಡಿಕೊಂಡು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಬೇಕು. ದೇವಿಯ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್, ಸ್ಯಾನಿಟೈಸರ್‌ ಬಳಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ದೇವಿಯ ದರ್ಶನ ಪಡೆಯಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದೇ ತಮ್ಮ ತಮ್ಮ ಮನೆಯಲ್ಲಿ ಸರಳವಾಗಿ ದಸರಾ ಆಚರಿಸಿ ಎಂದು ಸಲಹೆ ನೀಡಿದರು. ಕಂದಾಯ ನಿರೀಕ್ಷಕ ಶ್ರೀಧರ್‌, ಅರಸೀಕೆರೆ ಇನ್ಸ್‌ಪೆಕ್ಟರ್‌ ಕಿರಣ್‌ ಕುಮಾರ್‌, ಪಿಡಿಒ ಈ.ಉಮೇಶ್‌, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್‌, ಗುಮಾಸ್ತ ರಮೇಶ್‌, ಅರ್ಚಕರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next