Advertisement

ಅಕ್ರಮ ನೀರಾವರಿ ನಿಲ್ಲುವವರೆಗೂ ಹೋರಾಟ: ಕುಷ್ಟಗಿ

11:15 AM Jul 07, 2020 | Suhan S |

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿ ತಡೆಯಲು ಸಿಎಂ ಬಿ.ಎಸ್‌. ಯಡಿಯೂರಪ್ಪ ಆದೇಶಿಸಿದ್ದು, ಅಕ್ರಮ ನಿಲ್ಲುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರುಗಳ್ಳತನ ತಡೆಯಲು ನಮ್ಮ ಸಮಿತಿಯಿಂದ ಜಾಗೃತ ದಳ ರಚಿಸಲಾಗುತ್ತಿದೆ. ಅದು ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಎಲ್ಲೆಲ್ಲಿ ಅಕ್ರಮ ನಡೆಯುತ್ತಿದೆ ಎಂಬುದನ್ನು ಜಾಗೃತ ಸಮಿತಿ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ ಎಂದು ತಿಳಿಸಿದರು.

ಈಗಾಗಲೇ ರಾಯಚೂರು, ಕೊಪ್ಪಳ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಕ್ರಮಕ್ಕೆ ಮುಂದಾಗಿರುವುದು ಶ್ಲಾಘನೀಯ. ಆದರೆ, ಅದು ಕೇವಲ ಆರಂಭಿಕ ಯತ್ನವಾಗದೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿಯೇ ಅಕ್ರಮ ನೀರಾವರಿ ಹೆಚ್ಚಾಗಿರುವ ಅಂಶ ಅಲ್ಲಿನ ಜಿಲ್ಲಾಧಿಕಾರಿ ಗಮನಕ್ಕಿದೆ. ಜುಲೈನಲ್ಲಿ ನೀರು ಹರಿಸುವ ಪೂರ್ವದಲ್ಲಿಯೇ ಅಕ್ರಮ ಪಂಪ್‌ಸೆಟ್‌ಗಳನ್ನು ತೆಗೆಯುವಂತೆ ಅಲ್ಲಿನ ರೈತರಿಗೆ ಎಚ್ಚರಿಕೆ ನೀಡಬೇಕು. ಯಾರು ತೆಗೆಯುವುದಿಲ್ಲವೋ ಅಂಥವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಕ್ರಮ ಪಂಪ್‌ ಸೆಟ್‌ ತೆರವುಗೊಳಿಸದಿದ್ದಲ್ಲಿ ಜುಲೈನಲ್ಲಿ ಅಣೆಕಟ್ಟು ಮುಂದೆಯೇ ಬೃಹತ್‌ ಪ್ರತಿಭಟನೆ ಆರಂಭಿಸಲಾಗುವುದು. ಅಕ್ರಮ ಸ್ಥಗಿತವಾಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next