ಬೆಳಗಾವಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರೈತ, ಕೃಷಿ ಕಾರ್ಮಿಕರ ಸಂಘಟನೆಯು ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಆನ್‌ಲೈನ್ ಚಳವಳಿಯನ್ನು ಹಮ್ಮಿಕೊಂಡಿತ್ತು.
ಬ್ಯಾಂಕ್ ಸಾಲ ಮನ್ನಾ ಮಾಡಬೇಕು, ಬೀಜ, ರಸಗೊಬ್ಬರಗಳನ್ನು ಉಚಿತವಾಗಿ ನೀಡಬೇಕು, ಕೃಷಿ ಉತ್ಪನ್ನಗಳಿಗೆ ಯೋಗ್ಯಬೆಲೆ ಕೊಡಬೇಕು, ನರೆಗಾ ಕೆಲಸಗಳನ್ನು 200 ದಿನಗಳಿಗೆ ವಿಸ್ತರಣೆ ಮಾಡಬೇಕು, ವಲಸೆ ಕಾರ್ಮಿಕರಿಗೆ ಆಹಾರ, ವಸತಿ, ಔಷಧಗಳನ್ನು ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಪೋಸ್ಟರ್‌ಗಳನ್ನು ರೈತ, ಕೃಷಿ ಕಾರ್ಮಿಕರು ಪ್ರದರ್ಶಿಸಿದರು.
ಇದಲ್ಲದೆ ಬೇಡಿಕೆಗಳ ಭಾವಚಿತ್ರಗಳನ್ನು ವಾಟ್ಸ್ ಆ್ಯಪ್, ಫೇಸ್‌ಬುಕ್ ಮೂಲಕ ಸಹ ಪ್ರದರ್ಶಿಸಲಾಯಿತು. ಮೈಕ್ರೊ ಫೈನಾನ್ಸ್‌ಗಳೂ ಸೇರಿದಂತೆ ಬ್ಯಾಂಕು ಹಾಗೂ ಎಲ್ಲಾ ಸಾಲಗಳನ್ನು ಮನ್ನಾ ಮಾಡಬೇಕು. ಬಡ ಹಾಗೂ ಮಧ್ಯಮ ರೈತರಿಗೆ ಅಗತ್ಯವಿರುವಷ್ಟು ಬಡ್ಡಿರಹಿತ ದೀರ್ಘಾವಧಿ ಸಾಲವನ್ನು ನೀಡಬೇಕು. ಈ ವರ್ಷದ ಬೆಳೆಗೆ ಅಗತ್ಯವಾದ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃಷಿ ಒಳಸುರಿಗಳನ್ನು ಉಚಿತವಾಗಿ ನೀಡಬೇಕು. ಕೃಷಿ ಉತ್ಪನ್ನಗಳನ್ನು ಖರೀದಿಸಲು ಸಮರ್ಪಕವಾದ ವ್ಯವಸ್ಥೆ ಮಾಡಬೇಕು ಮತ್ತು ಉತ್ತಮ ಬೆಲೆ ನೀಡಬೇಕು. ಪೊಟ್ಯಾಶ್‌ನಿಂದ ತಯಾರಿಸಿದ ರಸಗೊಬ್ಬರಗಳಿಗೆ ಶೇ.9 ರಷ್ಟು ಸಬ್ಸಿಡಿಯನ್ನು ಕಡಿತಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು. ನರೆಗಾ ಯೋಜನೆಯಲ್ಲಿ ಕೃಷಿಕಾರ್ಮಿಕರಿಗೆ ಕನಿಷ್ಠ 200 ದಿನಗಳ ಕಾಲ ಕೆಲಸ ಕೊಡಬೇಕು ಎಂದು ಆಗ್ರಹಿಸಿದರು.
ಕೃಷಿಕಾರ್ಮಿಕರು, ಬಡ ಹಾಗೂ ಮಧ್ಯಮ ರೈತರಿಗೆ ಜೀವನಾಧಾರಕ್ಕಾಗಿ ವಿಶೇಷ ಪ್ಯಾಕೆಜ್ ಘೋಷಿಸಬೇಕು. ಇದಲ್ಲದೆ ಕೃಷಿಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಬೇಕು. ದಿನಕ್ಕೆ ಕನಿಷ್ಠ 600 ರೂ. ವೇತನವನ್ನು ನಿಗದಿಪಡಿಸಬೇಕು ಎಂದು ಸಂಘಟನೆಯ ಸದಸ್ಯರು ಆಗ್ರಹಿಸಿದರು. ವಲಸೆ ಕಾರ್ಮಿಕರಿಗೆ ಊಟ, ವಸತಿ, ವೈದ್ಯಕೀಯ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. ಕೋವಿಡ್ 19 ಶಂಕಿತರಿಗೆ ಪರೀಕ್ಷಾ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ ಚಳುವಳಿಯ ನೇತೃತ್ವ ವಹಿಸಿದ್ದರು. ರಮೇಶ ದಳವಾಯಿ, ಬಸಪ್ಪ ದಳವಾಯಿ, ಈರಪ್ಪ ಹಸಬಿ, ಪದ್ಮಾವತಿ ಮಠಪತಿ ಮತ್ತು ಕೃಷಿ ಕಾರ್ಮಿಕರು ಈ ಸಂದರ್ಭದಲ್ಲಿ ಹಾಜರಿದ್ದರು.