Advertisement

ದೇಶದೊಂದಿಗೆ ಕೈಜೋಡಿಸುವಂತೆ ಭಾರತೀಯ ಸಮುದಾಯಕ್ಕೆ ಮೋದಿ ಕರೆ

08:56 PM May 23, 2022 | Team Udayavani |

ಟೋಕಿಯೋ: ದೇಶದಲ್ಲಿ ತಮ್ಮ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಹಾಗೂ ಸುಧಾರಣಾ ಕಾರ್ಯಗಳನ್ನು ಪಟ್ಟಿ ಮಾಡಿರುವ ಪ್ರಧಾನಿ ಮೋದಿ ಅವರು, “ಭಾರತ್‌ ಚಲೋ, ಭಾರತ್‌ ಸೇ ಜುಡೋ’ (ಭಾರತಕ್ಕೆ ಬನ್ನಿ, ಭಾರತದೊಂದಿಗೆ ಸೇರಿ) ಅಭಿಯಾನದಲ್ಲಿ ಕೈಜೋಡಿಸುವಂತೆ ಜಪಾನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

Advertisement

ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಸೋಮವಾರ ಟೋಕಿಯೋದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಈ ರೀತಿ ಮಾತನಾಡಿದ್ದಾರೆ. ಸ್ವಾಮಿ ವಿವೇಕಾನಂದ ಹಾಗೂ ರಬೀಂದ್ರನಾಥ್‌ ಟ್ಯಾಗೋರ್‌ ಅವರ ಹೆಸರನ್ನೂ ಪ್ರಸ್ತಾಪಿಸಿದ ಮೋದಿ, ಭಾರತ ಮತ್ತು ಜಪಾನ್‌ ನಡುವೆ ಆಳವಾದ ಸಾಂಸ್ಕೃತಿಕ ಬಂಧವಿದೆ ಎಂದು ಹೇಳಿದ್ದಾರೆ.

“ಪ್ರತಿಯೊಬ್ಬ ಭಾರತೀಯನೂ ತಮ್ಮ ಜೀವನದಲ್ಲಿ ಒಂದು ಬಾರಿಯಾದರೂ ಜಪಾನ್‌ಗೆ ಭೇಟಿ ನೀಡಬೇಕು’ ಎಂದು ವಿವೇಕಾನಂದರು ಹೇಳಿದ್ದರು. ಇಂದು ನಾನು, “ಪ್ರತಿಯೊಬ್ಬ ಜಪಾನ್‌ ಪ್ರಜೆಯೂ ತಮ್ಮ ಬದುಕಿನಲ್ಲಿ ಒಂದು ಬಾರಿಯಾದರೂ ಭಾರತಕ್ಕೆ ಭೇಟಿ ನೀಡಬೇಕು’ ಎಂದು ಹೇಳುತ್ತೇನೆ. ನೀವೆಲ್ಲರೂ ಭಾರತಕ್ಕೆ ಒಮ್ಮೆ ಬನ್ನಿ. ಭಾರತ್‌ ಚಲೋ, ಭಾರತ್‌ ಸೇ ಜುಡೋ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಮೋದಿ ಹೇಳಿದ್ದಾರೆ.

ಜತೆಗೆ, ಭಾರತ ಮತ್ತು ಜಪಾನ್‌ ಸಹಜ ಪಾಲುದಾರ ರಾಷ್ಟ್ರಗಳು. ಭಾರತದ ಅಭಿವೃದ್ಧಿಯ ಪಯಣದಲ್ಲಿ ಜಪಾನ್‌ ಪ್ರಮುಖ ಪಾತ್ರ ವಹಿಸಿದೆ ಎಂದೂ ತಿಳಿಸಿದ್ದಾರೆ.

ಇಂದು ಕ್ವಾಡ್‌ ಶೃಂಗ ಸಭೆ:
ಇದಕ್ಕೂ ಮುನ್ನ ಇಂಡೋ-ಪೆಸಿಫಿಕ್‌ ಎಕನಾಮಿಕ್‌ ಫ್ರೆàಮ್‌ವರ್ಕ್‌(ಐಪಿಇಎಫ್) ಆರಂಭಿಸುವ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಕರೆದಿದ್ದ ಸಭೆಯಲ್ಲೂ ಪ್ರಧಾನಿ ಮೋದಿ ಭಾಗವಹಿಸಿದ್ದರು.

Advertisement

ಮಂಗಳವಾರ ಟೋಕಿಯೋದಲ್ಲಿ ಕ್ವಾಡ್‌ ಶೃಂಗಸಭೆ ನಡೆಯಲಿದೆ. ಜತೆಗೆ, ಮೋದಿ ಅವರು ಅಮೆರಿಕ ಅಧ್ಯಕ್ಷ ಬೈಡೆನ್‌, ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್‌, ಜಪಾನ್‌ ಪ್ರಧಾನಿ ಫ‌ುಮಿಯೋ ಕಿಶಿದಾರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಹೂಡಿಕೆಗೆ ಆಹ್ವಾನ
ಸಾಫ್ಟ್ ಬ್ಯಾಂಕ್‌ನ ಮಸಾಯೋಶಿ, ಸುಜುಕಿ ಮೋಟಾರ್‌ ಕಂಪನಿಯ ಒಸಾಮು ಸುಜುಕಿ ಸೇರಿದಂತೆ ಜಪಾನ್‌ನ ಪ್ರಮುಖ ಉದ್ದಿಮೆದಾರರೊಂದಿಗೆ ಪ್ರಧಾನಿ ಮೋದಿ ಸೋಮವಾರ ಸಂವಾದ ನಡೆಸಿದ್ದಾರೆ. ಭಾರತದಲ್ಲಿ ಜವಳಿಯಿಂದ ಹಿಡಿದು ಆಟೋಮೊಬೈಲ್‌ವರೆಗೆ, ತಂತ್ರಜ್ಞಾನದಿಂದ ಹಿಡಿದು ಸ್ಟಾರ್ಟಪ್‌ವರೆಗೆ ವಿವಿಧ ವಲಯಗಳಲ್ಲಿ ಸಾಕಷ್ಟು ಹೂಡಿಕೆ ಅವಕಾಶಗಳಿವೆ. ಈ ಅವಕಾಶಗಳನ್ನು ನೀವು ಸದುಪಯೋಗಪಡಿಸಿಕೊಳ್ಳಿ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ, ಹೊಸ ಹೂಡಿಕೆ ಉತ್ತೇಜನಾ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ಟೋಕಿಯೋದಲ್ಲಿ ಸಹಿ ಹಾಕಿವೆ.

ವಾವ್‌, ಹಿಂದಿ ಭಾಷೆ ಹೇಗೆ ಕಲಿತೆ?
ಸೋಮವಾರ ಬೆಳಗ್ಗೆ ಟೋಕಿಯೋ ತಲುಪಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಭಾರತೀಯ ಮೂಲದವರ ಜತೆ ಟೋಕಿಯೋ ನಾಗರಿಕರೂ ಮೋದಿಯನ್ನು ಸ್ವಾಗತಿಸಿದ್ದಾರೆ. ಈ ವೇಳೆ ಟೋಕಿಯೋದ ಬಾಲಕನೊಬ್ಬ ಮೋದಿಯವರಿಗಾಗಿ ಪ್ರೀತಿಯಿಂದ ತಂದಿದ್ದ ಗ್ರೀಟಿಂಗ್‌ ಕಾರ್ಡ್‌ ನೋಡಿ, ಪ್ರಧಾನಿ ಖುಷಿಪಟ್ಟಿದ್ದಾರೆ. ವಿಶೇಷವೆಂದರೆ, ಟೋಕಿಯೋದ ಆ ಬಾಲಕ ಹಿಂದಿ ಭಾಷೆಯಲ್ಲೇ, “ಜಪಾನ್‌ಗೆ ಸ್ವಾಗತ. ನಾನು ನಿಮ್ಮ ಆಟೋಗ್ರಾಫ್ ಪಡೆಯಬಹುದೇ’ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ, “ವಾವ್‌, ಹಿಂದಿ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಿ. ಈ ಭಾಷೆಯನ್ನು ನೀನು ಕಲಿತಿದ್ದು ಹೇಗೆ?’ ಎಂದು ಪ್ರಶ್ನಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next