ಲಂಡನ್/ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡಿ ಚಂದ ನೋಡುವ ಪಾಕಿಸ್ತಾನ ಸರ್ಕಾರ ಮತ್ತೂಮ್ಮೆ ಜಗತ್ತಿನ ಮುಂದೆ ಬೆತ್ತಲಾಗಿದೆ. ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇರುವ ಇರಾನ್‌ನ ಕಂಪನಿಗೆ ಬೃಹತ್ ಪ್ರಮಾಣದ ಕಂಟೈನರ್‌ನಲ್ಲಿ ಯುರೇನಿಯಂ ಪೂರೈಕೆ ಮಾಡುವ ಪಾಕಿಸ್ತಾನದ ಕಳ್ಳಜಾಲ ಅನಾವರಣಗೊಂಡಿದೆ. ಅದನ್ನು ಪರಮಾಣು ಬಾಂಬ್ ತಯಾರಿಸಲು ಪೂರೈಕೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಒಮಾನ್‌ನಿಂದ ಆಗಮಿಸಿದ ವಿಮಾನದಲ್ಲಿ ಬೃಹತ್ ಕಂಟೈನರ್ ಬಗ್ಗೆ ಸಂಶಯದ ಗೆರೆಗಳು ಎದ್ದಿತ್ತು. ಈ ಹಿನ್ನೆಲೆಯಲ್ಲಿ ಯು.ಕೆ. ಉಗ್ರ ನಿಗ್ರಹ ದಳಕ್ಕೆ ಕೂಡಲೇ ಸ್ಥಳಕ್ಕೆ ಆಗಮಿಸಲು ಸೂಚನೆ ನೀಡಲಾಯಿತು. ಅಧಿಕಾರಿಗಳ ಸಮಕ್ಷಮದಲ್ಲಿ ಅತ್ಯಾಧುನಿಕ ಸ್ಕ್ಯಾನರ್‌ಗಳ ಮೂಲಕ ಕಂಟೈನರ್ ಅನ್ನು ಶೋಧಿಸಿದಾಗ ಅದರಲ್ಲಿ ಯುರೇನಿಯಂ ಇದ್ದದ್ದು ಖಚಿತವಾಯಿತು. 2022 ಡಿ.29ರಂದೇ ಈ ಪ್ರಕರಣ ನಡೆದಿದ್ದರೂ, ತಡವಾಗಿ ಪಾಕಿಸ್ತಾನದ ಕುತ್ಸಿತ ಬುದ್ಧಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಯು.ಕೆ.ಯಲ್ಲಿ ಇರುವ ಇರಾನ್‌ನ ಕೆಲವರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ.
ನೋಂದಣಿ ಮಾಡಿರಲಿಲ್ಲ:
ಪ್ರಯಾಣಿಕ ವಿಮಾನದಲ್ಲಿ ಸಾಗಣೆ ಮಾಡಲಾಗಿದ್ದ ಕಂಟೈನರ್ ಅನ್ನು ನೋಂದಣಿ ಮಾಡಿರಲಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ. 2004ರಲ್ಲಿ ಪಾಕಿಸ್ತಾನದ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಅವರು ಇರಾನ್‌ಗೆ ಪರಮಾಣು ತಂತ್ರಜ್ಞಾನವನ್ನು ನೀಡಿದ್ದ ಆಘಾತಕಾರಿ ಅಂಶ ಬಯಲಾಗಿತ್ತು. ಆದರೆ, ಪಾಕಿಸ್ತಾನ ಸರ್ಕಾರ ಯು.ಕೆ.ಗೆ ಯುರೇನಿಯಂ ಸಾಗಿಸಿಲ್ಲ ಎಂದು ಹೇಳಿಕೊಂಡಿದೆ.
Related Articles
ಪಿಒಕೆಯಲ್ಲೂ ಆಹಾರಕ್ಕೆ ಹಾಹಾಕಾರ:
ಭಾರತಕ್ಕೇ ಸೇರಬೇಕಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯಲ್ಲಿಯೂ ಆಹಾರದ ಕೊರತೆ ಉಂಟಾಗಿದೆ. ಬಂದೂಕಿನ ಬಂದೋಬಸ್ತ್ ಮೂಲಕ ಗೋಧಿ ಹಿಟ್ಟು, ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತದೆ. ಆದರೆ, ವಾಣಿಜ್ಯ ಮಳಿಗೆಗಳಿಗೆ ಆಹಾರ ವಸ್ತುಗಳ ಪೂರೈಕೆಯಲ್ಲಿಯೂ ಕೂಡ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ಭಾಗ್ ಮತ್ತು ಮುಜಾಫರಾಬಾದ್‌ನಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಿದೆ. ರಿಯಾಯಿತಿ ದರದಲ್ಲಿ ಸರ್ಕಾರ ವಿತರಿಸುತ್ತಿರುವ ಗೋಧಿ ಸಂಪೂರ್ಣಯಾಗಿ ಸ್ಥಗಿತಗೊಂಡಿದೆ. ಬೇಡಿಕೆಗೆ ತಕ್ಕಂತೆ ಗೋಧಿ ಹಿಟ್ಟು ಪೂರೈಕೆಯಾಗುತ್ತಿಲ್ಲದೇ ಇರುವುದರಿಂದ ಅದರ ಬೆಲೆಯಲ್ಲಿಯೂ ಏರಿಕೆಯಾಗಿದೆ.
“ಸರ್ಕಾರ ನಮಗೆ ಸೂಕ್ತ ರೀತಿಯಲ್ಲಿ ಆಹಾರ ವಿತರಿಸಲು ಕ್ರಮ ಕೈಗೊಳ್ಳುತ್ತಿಲ್ಲ. ಸ್ಥಳೀಯಲಾಗಿ ಪ್ರತಿಭಟನೆ ಶುರು ಮಾಡಿದ್ದೇವೆ. ಇಡೀ ಪ್ರದೇಶಕ್ಕೆ ಅದನ್ನು ನಾವು ವಿಸ್ತರಿಸುತ್ತೇವೆ. ಸರ್ಕಾರ ಭಾರೀ ಸವಾಲುಗಳನ್ನು ಎದುರಿಸಲಿದೆ’ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವರ್ತಕರೂ ಕೂಡ ಅಸಹಾಯಕತೆ ಪ್ರದರ್ಶಿಸಿದ್ದಾರೆ. ಅಗತ್ಯ ವಸ್ತುಗಳ ದರಗಳು ಕೈಗಟಕುವ ಮಟ್ಟಕ್ಕಿಂತ ಏರಿಕೆಯಾಗಿದೆ. ಸರ್ಕಾರವೂ ಕೂಡ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಪೂರೈಕೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.