Advertisement

ಕೂಲಿ ಕಾರ್ಮಿಕನ ಮಗ UPSC ಪಾಸ್ : ಸರೂರು ತಾಂಡಾದ ಯಲಗೂರೇಶ ಸಾಧನೆ

06:33 PM May 23, 2023 | Team Udayavani |
ವಿಜಯಪುರ : ತುಂಡು ಜಮೀನಿಲ್ಲದೆಯೂ ಹೆತ್ತವರು ಕೂಲಿ ಮಾಡುತ್ತ ಓದಿಸಿದ್ದರು. ತರಬೇತಿ ಹಂತದಲ್ಲಿ ಪೊಲೀಸ್ ಉದ್ಯೋಗಕ್ಕೆ ಸೇರಿದ್ದ ಅಣ್ಣ ನೀಡಿದ ಆರ್ಥಿಕ ನೆರವು ಇದೀಗ ಈ ಯುವಕನನ್ನು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಮಾಡಿದೆ.
ಇದು ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿರುವ ಫಲಿತಾಂಶದಲ್ಲಿ 890 ನೇ ರ‍್ಯಾಂಕ್‌ ಪಡೆದಿರುವ ಯಲಗೂರೇಶ ನಾಯಕ ಎಂಬ ಯುವಕನೇ ಜಿಲ್ಲೆಗೆ ಕೀರ್ತಿ ತಂದಿರುವ ಸಾಧಕ. ಮುದ್ದೇಬಿಹಾಳ ತಾಲೂಕ ಸರೂರು ತಾಂಡಾದ ಅರ್ಜುನ ಹಾಗೂ ಉಮಾಬಾಯಿ ಅವರ ಮಗನಾದ ಯಲಗೂರೇಶ ಬಿ.ಕಾಂ. ಪದವೀಧರ. 1-5 ನೇ ತರಗತಿ ವರೆಗೆ ಹುಟ್ಟೂರು ಸರೂರು ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ, ಬಳಿಕ 6-10ನೇ ತರಗತಿ ವರೆಗೆ ಮುದ್ದೇಬಿಹಾಳ ಪಟ್ಟಣದಲ್ಲಿ ಕನಕದಾಸ ಶಾಲೆಯಲ್ಲಿ ಓದಿದ್ದ.
ಬಳಿಕ ಪಿಯುಸಿ ಹಂತದಿಂದ ಪದವಿ ವರೆಗೆ ಎಂಜಿವಿಸಿ ಕಾಲೇಜಿನಲ್ಲಿ ಓದಿದ್ದು, ಬಿ.ಕಾಂ. ಪದವಿ ಮುಗಿಯುತ್ತಲೇ ಕೇಂದ್ರ ಲೋಕಸೇವಾ ಆಯೊಗದ ಪರೀಕ್ಷೆ ಎದುರಿಸಬೇಕು ಎಂಬ ಮಹದಾಸೆ ಇರಿಸಿಕೊಂಡಿದ್ದ. ಹೆತ್ತವರ ಬಡತನದಿಂದಾಗಿ ದೂರದ ಬೆಂಗಳೂರು, ಹೈದ್ರಾಬಾದ್, ದೆಹಲಿಯಂತ ಮಹಾನಗರಗಳಿಗೆ ಹೋಗಿ, ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆಯುವ ಆಸೆ ಇನ್ನೇನು ಅಸಾಧ್ಯ ಎನಿಸಿತ್ತು.
ಈ ಹಂತದಲ್ಲಿ ಅಣ್ಣ ಸಚಿನ್ ಪೊಲೀಸ್ ಇಲಾಖೆಯಲ್ಲಿ ಸೇವೆವೆ ಸೇರಿದ್ದು, ದೆಹಲಿಗೆ ಹೋಗಿ ತರಬೇತಿ ಪಡೆಯುವಲ್ಲಿ ಆರ್ಥಿಕ ನೆರವು ನೀಡುವಲ್ಲಿ ಸಹಕಾರಿ ಆಯ್ತು. ಸತತ ಓದು, ಪರಿಶ್ರಮದಿಂದ ನಾಲ್ಕನೇ ಪ್ರಯತ್ನದಲ್ಲಿ ಯಲಗೂರೇಶ ಕೊನೆಗೂ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಾನೆ.
ಕುಟುಂಬದ ಹಸಿವು, ಗ್ರಾಮೀಣ ಜನರ ಅದರಲ್ಲೂ ತಾಂಡಾದಲ್ಲಿರುವ ಬಡತನದಂಥ ಸ್ಥಿತಿಗಳು ನನ್ನ ಸಾಧನೆಗೆ ನಿಜಕ್ಕೂ ಕಿಚ್ಚುಹೊತ್ತಿಸಿದ್ದವು. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು. ಸಾಧಿಸುವುದಕ್ಕಾಗಿ ಬಡತನದ ನೆಪ ಹೇಳಕೂಡದೆಂದುಕೊಂಡು, ಸಾಧನೆಗೆ ಅಣಿಯಾಗಿದ್ದ ಯಲಗೂರೇಶ.
ಕುಟುಂಬದ ಬಡತನದಲ್ಲೇ ಒಬ್ಬ ಉತ್ತಮ ಶಿಕ್ಷಣ ಪಡೆದು ಶಿಕ್ಷಕಿಯಾಗಿದ್ದು, ಅಣ್ಣ ಸಚಿನ್ ಪೊಲೀಸ್ ಇಲಾಖೆಗೆ ಸೇರಿ ಮೈಸೂರಿನಲ್ಲಿ ಸೇವೆಯಲ್ಲಿದ್ದಾನೆ. ಹೀಗಿರುವಾಗ ನಾನೇನೆ ಸಾಧನೆ ಮಾಡಬಾರದು ಎಂಬ ಛಲದೊಂದಿಗೆ ಯುಪಿಎಸ್‍ಸಿ ಪರೀಕ್ಷೆ ಕಟ್ಟುತ್ತಲೇ ಬಂದೆ. ಸತತ ಸೋಲಿನ ಬಳಿಕ ನಾಲ್ಕನೇ ಪ್ರಯತ್ನದಲ್ಲಿ ನಾನು ಪಾಸಾಸಾಗಿದ್ದೇನೆ ಎನ್ನುತ್ತಾನೆ ಯಲಗೂರೇಶ ನಾಯಕ.
ಅಂತಿಮವಾಗಿ ಕಳೆದ ವರ್ಷದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, 890 ನೇ ರ‍್ಯಾಂಕ್‌ ಪಡೆದಿದ್ದರೂ ಗುಡಿಸಲಿನ ಬಡನತ ಆತನನ್ನು ಭಾರತೀಯ ಆಡಳಿತ ಸೇವೆಗೆ ಸೇರುವ ದರ್ಜೆಯಲ್ಲಿ ಪಾಸಾಗುವ ಛಲವನ್ನು ಹುಟ್ಟುಹಾಕಿದೆ. ಹೀಗಾಗಿ ಇದೀಗ ಮತ್ತೊಮ್ಮೆ ಪರೀಕ್ಷೆ ಎದುರಿಸುವುದಾಗಿ ಹೇಳುತ್ತಾನೆ ಯಲಗೂರೇಶ.
ನನ್ನ ಹೆತ್ತವರು ಪಟ್ಟ ಪಾಡು, ಜಮೀನಿಲ್ಲದಿದ್ದರೂ ಕೂಲಿ ಮಾಡುತ್ತಲೇ ನಮ್ಮ ಬದುಕು ರೂಪಿಸಲು ಹೆಣಗಿದ ಪರಿ ನನ್ನಲ್ಲಿ ಉನ್ನತ ಅಧಿಕಾರಿಯಾಗಲು ಪ್ರೇರಣೆ ನೀಡಿದೆ. ತರಬೇತಿ ಪಡೆಯಲು ನೆರವಾಗಿದ್ದು ಪೊಲೀಸ್ ಇಲಾಖೆಯಲ್ಲಿರುವ ಅಣ್ಣ ಸಚಿನ್. ಎಲ್ಲ ಹಂತದಲ್ಲೂ ಶಿಕ್ಷಕರ ಮಾರ್ಗದರ್ಶದಿಂದ ಇದೀಗ ಒಂದು ಹಂತಕ್ಕೆ ಬಂದಿದ್ದೇನೆ. ಫಲಿತಾಂಶ ತೃಪ್ತಿ ತಂದಿಲ್ಲ, ಮತ್ತೊಮ್ಮೆ ಪರೀಕ್ಷೆ ಎದುರಿಸುತ್ತೇನೆ.
– ಯಲಗೂರೇಶ ನಾಯಕ, ಯುಪಿಎಸ್‍ಸಿ ಅಭ್ಯರ್ಥಿ ಸರೂರು ತಾಂಡಾ ಮುದ್ದೇಬಿಹಾಳ
– ಜಿ.ಎಸ್.ಕಮತರ
Advertisement

Udayavani is now on Telegram. Click here to join our channel and stay updated with the latest news.

Next