ಉಪ್ಪುಂದ: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಘಟನೆ ಕಿರಿಮಂಜೇಶ್ವರ ಗ್ರಾಮದ ಶ್ರೀ ಕಾನವೀರ ಬಸ್ತಿ ಅಮ್ಮನವರ ದೈವಸ್ಥಾನದಲ್ಲಿ ಜ.19ರಂದು ಸಂಭವಿಸಿದೆ.
ಇಲ್ಲಿನ ನಾಯರಿಕೇರಿ ಸೋಡಿತಟ್ಟು ನಿವಾಸಿ ವಿಜಯಲಕ್ಷ್ಮೀ ಅವರು 2004ರಲ್ಲಿ ಹೊಸಮನೆ ಶಿವಶಂಕರ ನಾಯರಿ ಅವರನ್ನು ಮದುವೆಯಾಗಿದ್ದು, ಸ್ವಲ್ಪ ಸಮಯ ಗಂಡನ ಮನೆಯಲ್ಲಿದ್ದು ಅನಂತರ ಪತಿಯ ಕಿರುಕುಳ ಮತ್ತು ಬೆದರಿಕೆಯಿಂದ ತಾಯಿ ಮನೆಗೆ ಹೋಗಿದ್ದರು.
ಜ.19ರಂದು ಶ್ರೀ ಕಾನವೀರ ಬಸ್ತಿ ಅಮ್ಮನವರ ದೈವಸ್ಥಾನದಲ್ಲಿ ನಡೆದ ಕಾರ್ಯಕ್ರಮದ ವೇಳೆ ವಿಜಯಲಕ್ಷ್ಮೀ ಮತ್ತು ಮನೆಯವರು ಅನ್ನ ಪ್ರಸಾದ ಸ್ವೀಕರಿಸಲು ಸರತಿ ಸಾಲಿನಲ್ಲಿ ನಿಂತ ವೇಳೆ ಆರೋಪಿ ಶಿವಶಂಕರ ನಾಯರಿ ಬಾಟಲಿಯಲ್ಲಿ ತಂದ ಪೆಟ್ರೋಲ್ ಅನ್ನು ವಿಜಯಲಕ್ಷ್ಮೀಯ ಕಾಲು ಮತ್ತು ಸೀರೆಯ ಮೇಲೆ ಚೆಲ್ಲಿ ಲೈಟರ್‌ನಿಂದ ಬೆಂಕಿ ಹಚ್ಚಿದ್ದ. ಸ್ಥಳೀಯರು ಬೆಂಕಿಯನ್ನು ನಂದಿಸಿ ಆಕೆಯನ್ನು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.