ಉಪ್ಪುಂದ: ಉಪ್ಪುಂದ: ಶಾಲೆಯಿಂದ ಮನೆಗೆ ವಾಪಾಸ್ಸಾಗುತ್ತಿದ್ದಾಗ ಕಾಲುಸಂಕ ದಾಟುತ್ತಿದ್ದ ವೇಳೆ ಆಯತಪ್ಪಿ ಹರಿಯುವ ನದಿಗೆ ಬಿದ್ದು ನೀರುಪಾಲಾದ ಕಾಲ್ತೋಡು ಗ್ರಾಮದ ಮಕ್ಕಿಮನೆ ನಿವಾಸಿಯಾದ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ (7) ಮೃತದೇಹ 48 ಗಂಟೆ ಬಳಿಕ ಪತ್ತೆಯಾಗಿದೆ.
ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು ನಿರಂತರವಾಗಿ ಶೋಧ ಕಾರ್ಯ ನಡೆಸಲಾಗಿತ್ತು.
ಬುಧವಾರ ಸಂಜೆ ಆಕೆ ಮೃತದೇಹ ಕಾಲುಸಂಕದಿಂದ 500 ಮೀಟರ್ ದೂರದಲ್ಲಿ ಪತ್ತೆಯಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು, ಈಜುಪಟುಗಳಾದ ಮೀನುಗಾರ ನರೇಶ್ ಕೊಡೇರಿಯವರ ಮುಂದಾಳತ್ವದ 22 ಜನರ ತಂಡ, ಸಾರ್ವಜನಿಕರೂ ಸೇರಿ ನೂರಕ್ಕೂ ಅಧಿಕ ಮಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮನೆಯವರ ಆಕ್ರಂದನ:
ಕಾಲ್ತೋಡು ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೇ ಪುತ್ರಿ ಸನ್ನಿಧಿ ನೀರುಪಾಲಾಗಿ 48 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದ್ದು, ಮನೆಮಂದಿಯ ಆಕ್ರಂದನ ಮುಗಿಲುಮುಟ್ಟಿದೆ.