Advertisement

ನಾಪತ್ತೆಯಾಗಿದ್ದ ಕೌಕ್ರಾಡಿಯ ವೃದ್ಧೆ ಪತ್ತೆ: 3 ದಿನ ಅರಣ್ಯದಲ್ಲೇ ವಾಸ; ಎಲೆಗಳೇ ಆಹಾರ

11:54 PM Mar 07, 2023 | Team Udayavani |

ಉಪ್ಪಿನಂಗಡಿ: ನೆರೆ ಮನೆಗೆ ಹೋಗಿ ವಾಪಸು ಬರುವಾಗ ದಾರಿ ತಪ್ಪಿ ನಾಪತ್ತೆಯಾಗಿ ಕಾಡು ಸೇರಿದ್ದ ವೃದ್ಧೆಯೋರ್ವರು ಮೂರು ದಿನಗಳ ಬಳಿಕ ಮತ್ತೆ ಮನೆ ಸೇರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಫೆ.28ರಂದು ಸಂಜೆ ವೇಳೆ ನಾಪತ್ತೆಯಾಗಿದ್ದ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ (80)ಅವರು ಮನೆಯಿಂದ ಸುಮಾರು 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ. ಅರಣ್ಯದಲ್ಲೇ ಮೂರು ರಾತ್ರಿ ಹಾಗೂ ಎರಡು ಹಗಲು ಕಳೆದಿರುವ ಐಸಮ್ಮರವರು ಕಾಡಿನಲ್ಲಿದ್ದ ಎಲೆಗಳನ್ನೇ ತಿಂದು ಸುರಕ್ಷಿತವಾಗಿ ಮನೆ ಸೇರಿರುವುದರಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಐಸಮ್ಮ ಅವರು ತುಸು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ವಯೋ ಸಹಜವಾಗಿ ಮಾತನಾಡುವುದು ಕಡಿಮೆಯಾಗಿತ್ತು. ಆದರೆ ತಮ್ಮ ನೆರೆಯ ಮನೆಗಳಿಗೆ ದಿನಾಲೂ ಭೇಟಿ ನೀಡಿ ಅವರೊಂದಿಗೆ ಬೆರೆತು ರಾತ್ರಿಯಾಗುತ್ತಲೇ ತಮ್ಮ ಮನೆ ಸೇರುತ್ತಿದ್ದರು. ಎಂದಿನಂತೆ ಫೆ.28ರಂದು ಸಂಜೆ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಐಸಮ್ಮ ಅವರು ಮನೆಗೆ ಹಿಂದಿರುಗದೇ ಇದ್ದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್‌ ನೆರೆ ಮನೆಗಳಲ್ಲಿ, ವಿಚಾರಿಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ.

ಏರ್ತಿಲ ಅರಣ್ಯದಲ್ಲಿ ಪತ್ತೆ
ಮಾ.3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ಶಿಜು ಅವರಿಗೆ ಮಣ್ಣಗುಂಡಿ ಸಮೀಪದ ಏರ್ತಿಲ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರು ಅಲೆದಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಾಹಿತಿ ಹರಡಿ ಹುಡುಕಾಡಿದಾಗ ನಾಪತ್ತೆಯಾಗಿದ್ದ ಐಸಮ್ಮರವರು ಕಂಡು ಬಂದರು. ಅವರನ್ನು ಬಳಿಕ ಮನೆಗೆ ಕರೆದುಕೊಂಡು ಬರಲಾಯಿತು.

ತಾಯಿಗಾಗಿ ಮೂರು ದಿನ ನಾವು ಹುಡುಕಾಟ ನಡೆಸದ ಜಾಗವಿಲ್ಲ. ಅವರು ನಾಪತ್ತೆಯಾಗಿದ್ದ ಮೊದಲ ದಿನ ಕಾಡಿನಲ್ಲಿ ತಡರಾತ್ರಿ 2 ಗಂಟೆ ತನಕವೂ ಹುಡುಕಾಟ ನಡೆಸಿದ್ದೇವೆ. ಸ್ಥಳೀಯ ಯುವಕರ ತಂಡವೂ ಹುಡುಕಾಟದಲ್ಲಿ ಸಾಥ್‌ ನೆರವು ನೀಡಿದ್ದರು. ಆದರೂ ನಮಗೆ ಯಾವುದೇ ಸುಳಿವು ಸಿಗಲಿಲ್ಲ. ತಾಯಿ ಕ್ಷೇಮವಾಗಿ ಬರಲೆಂದು ಹರಕೆಯೂ ಹೇಳಿದ್ದೇವೆ. ಇದೀಗ ತಾಯಿ ಕ್ಷೇಮವಾಗಿ ಬಂದಿರುವುದು ಸಂತಸ ತಂದಿದೆ ಎಂದು ಅವರ ಮಗ ಮಹಮ್ಮದ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next