ಉಪ್ಪಿನಂಗಡಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಸಹ ಪ್ರಯಾಣಿಕರ ಸಹಕಾರದಿಂದ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ನೆಲ್ಯಾಡಿಯಲ್ಲಿ ಹತ್ತಿದ ವಿದ್ಯಾರ್ಥಿನಿಗೆ ಪೆರ್ನೆ ಗ್ರಾಮದ ನಿವಾಸಿ ಅಶ್ರಫ್ (45) ಲೈಂಗಿಕ ಕಿರುಕುಳ ನೀಡುತ್ತಿದ್ದನೆಂದು ಆಪಾದಿಸಲಾಗಿದೆ. ಆತ ಬಸ್ ಸಾಗುತ್ತಿರುವ ವàಳೆ ತನ್ನ ಖಾಸಗಿ ಸ್ಥಳವನ್ನು ಸ್ಪರ್ಶಿಸುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.
ಲೈಂಗಿಕ ಕಿರುಕುಳದಿಂದ ಕಂಗೆಟ್ಟ ವಿದ್ಯಾರ್ಥಿನಿ ಈ ಬಗ್ಗೆ ಕಂಡೆಕ್ಟರ್‌ರಲ್ಲಿ ದೂರಿದ ಬಳಿಕ ಕಂಡೆಕ್ಟರ್ ಹಾಗೂ ಸಹಪ್ರಯಾಣಿಕರು ಆರೋಪಿ ಅಶ್ರಫ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಅಶ್ರಫ್ ವಿವಾಹಿತನಾಗಿದ್ದು ಮೂವರು ಮಕ್ಕಳ ತಂದೆಯಾಗಿದ್ದಾನೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಈತ ಬಸ್ಸಿನಲ್ಲಿ ಸಹಪ್ರಯಾಣಿಕರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಸ್ಸಿನ ಸಿಬಂದಿ ಬಸ್ಸನ್ನು ನೇರವಾಗಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ ಕಾರಣ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಲು ಸಾಧ್ಯವಾಯಿತು.
ಕಲಿಕಾ ಪ್ರಕ್ರಿಯೆಗೆ ಅಡಚಣೆ ಯಾಗುವ ಭೀತಿಯಿಂದ ಸಂತ್ರಸ್ತೆ ವಿದ್ಯಾರ್ಥಿನಿ ದೂರು ನೀಡಲು ನಿರಾಕರಿಸಿದ್ದಾರೆಂದು ಪೊಲೀಸರು ತಿಳಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.