Advertisement

Uppinangady ಕೀಲಿಕೈ ಚಮತ್ಕಾರ!ಯಾರದೋ ಸ್ಕೂಟರನ್ನು ಯಾರೋ ಕೊಂಡೊಯ್ದರು!

12:07 AM Dec 27, 2024 | Team Udayavani |

ಉಪ್ಪಿನಂಗಡಿ: ಕೀಲಿಕೈಯ ಚಮತ್ಕಾರದಿಂದ ವಾಹನ ಬದಲಾದರೂ ತಿಳಿಯದೆ ಕೊಂಡೊಯ್ದ ಯುವಕರು… ಬದಲಿ ವಾಹನವನ್ನು ಕಂಡು ಕಂಗೆಟ್ಟ ಅಂಗಡಿ ಮಾಲಕ… ಕೊನೆಗೂ ಅಲ್ಲಿದ್ದ ವಾಹನದ ಮೂಲ ಮಾಲಕರನ್ನು ಪತ್ತೆಹಚ್ಚಿ ತನ್ನ ವಾಹನವನ್ನು ಮರಳಿ ದಕ್ಕಿಸಿಕೊಂಡ ಘಟನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.

Advertisement

ಉಪ್ಪಿನಂಗಡಿಯ ಹಳೇ ಬಸ್‌ ನಿಲ್ದಾಣದ ಬಳಿ ಇರುವ ಸೌದಿ ಫ್ಯಾನ್ಸಿಗೆ ಕಳೆದ ರಾತ್ರಿ ಕೊನೆಯ ಗ್ರಾಹಕರಾಗಿ ಬಂದಿದ್ದ ಇಬ್ಬರು ಯುವಕರು ಮರಳುವಾಗ ತಾವು ಬಂದಿದ್ದ ಆ್ಯಕ್ಟೀವಾದ ಬದಲು ಅಲ್ಲೇ ಇದ್ದ ಅಂಗಡಿ ಮಾಲಕರ ಆ್ಯಕ್ಟೀವಾವನ್ನು ತಮ್ಮಲ್ಲಿದ್ದ ಕೀ ಬಳಸಿ ಚಲಾಯಿಸಿಕೊಂಡು ಹೋಗಿದ್ದರು. ಅಂಗಡಿ ಮಾಲಕ ರಾತ್ರಿ ಮನೆಗೆ ಹೊರಟಾಗ ತನ್ನ ವಾಹನದ ಬದಲು ಬೇರೊಂದು ಇರುವುದು ಗಮನಕ್ಕೆ ಬಂದಿತ್ತು. ಪರೀಕ್ಷಿಸುವ ನಿಟ್ಟಿನಲ್ಲಿ ತನ್ನಲ್ಲಿದ್ದ ಕೀಲಿಕೈಯನ್ನು ಬಳಸಿದಾಗ ಚಾಲನೆಗೊಂಡಿತು. ಕೀಲಿಕೈಯ ಚಮತ್ಕಾರದಿಂದಾಗಿ ವಾಹನ ಬದಲಾವಣೆಗೊಂಡಿರು ವುದಾಗಿ ಅಂದಾಜಿಸಲಾಯಿತು.

ಮರು ದಿನ ಸಾರಿಗೆ ಇಲಾಖೆಯ ಮೂಲಕ ವಾಹನ ಸಂಖ್ಯೆಯನ್ನಾಧರಿಸಿ ಅದರ ಮೂಲ ಮಾಲಕರನ್ನು ಪತ್ತೆ ಹಚ್ಚಲಾಯಿತ್ತಾದರೂ, ಅದರ ಆರ್‌ಸಿ ಓನರ್‌ ಮಂಗಳೂರಿನ ವ್ಯಕ್ತಿ ಎಂದು ತಿಳಿದು ಬಂತು. ಅವರನ್ನು ಸಂಪರ್ಕಿಸಿದಾಗ ಅವರು ವಾಹನವನ್ನು ತನ್ನ ಸಂಬಂಧಿಕರಿಗೆ ನೀಡಿರುವುದಾಗಿ ತಿಳಿಸಿದರು. ಕೊನೆಗೂ ವಾಹನದ ನೈಜ ವಾರಸುದಾರರನ ಹಿರೆಬಂಡಾಡಿಯಲ್ಲಿ ಪತ್ತೆಹಚ್ಚಿ ವಿಚಾರ ತಿಳಿಸಿದಾಗಲೇ ಅವರಿಗೆ ತಾವು ಉಪ್ಪಿನಂಗಡಿಯಿಂದ ಬೇರೆಯವರ ವಾಹನವನ್ನು ತಂದಿದ್ದೇವೆ ಎಂದು ತಿಳಿದದ್ದು.

ನಡೆದದ್ದೇನು?
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮನೆ ಮಕ್ಕಳು ಮನೆಯ ನೇಮಕ್ಕೆ ಬಂದವರು ವಸ್ತು ಖರೀದಿಗೆಂದು ಮನೆಯಲ್ಲಿದ್ದ ಆ್ಯಕ್ಟಿವಾವನ್ನು ತೆಗೆದುಕೊಂಡು ಹೋದವರಿಗೆ ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ವಾಹನ ಯಾವುದೆಂದು ತಿಳಿಯದೆ ಈ ಪ್ರಕರಣ ನಡೆದಿತ್ತು. ಅಚಾತುರ್ಯಕ್ಕಾಗಿ ಕ್ಷಮಾಪಣೆ ಕೇಳಿ ವಾಹನವನ್ನು ಬದಲಾಯಿಸಿಕೊಳ್ಳಲಾ ಯಿತು. ತನ್ಮೂಲಕ ಪ್ರಕರಣ ಸುಖಾಂತ್ಯ ಕಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next