Advertisement
ಪಿಲಿಗೂಡು ನಿವಾಸಿ ಮಹಿಳೆ ಪತಿಯೊಂದಿಗಿನ ವಿರಸದಿಂದ ಗುರುವಾರ ರಾತ್ರಿ ನಡೆದುಕೊಂಡೇ 4 ಕಿ.ಮೀ. ದೂರದ ನೇತ್ರಾವತಿ ಸೇತುವೆಗೆ ಬಂದು ನದಿಗೆ ಹಾರಲು ಯತ್ನಿಸುತ್ತಿದ್ದರು. ಆದರೆ ಅವರನ್ನು ಮನೆಯಿಂದಲೇ ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಅಪಾಯ ವನ್ನು ಅರಿತು ಮಹಿಳೆಯ ಚೂಡಿದಾರವನ್ನು ಕಚ್ಚಿ ಹಿಡಿದು, ಬೊಗಳುತ್ತಾ ರಸ್ತೆಯಲ್ಲಿ ಹೋಗುತ್ತಿರುವವರ ಗಮನ ಸೆಳೆಯುವ ಪ್ರಯತ್ನ ನಡೆಸುತ್ತಿತ್ತು. ಇದೇ ವೇಳೆ ಬೈಕ್‌ನಲ್ಲಿ ಬಂದ ವ್ಯಕ್ತಿಯೋರ್ವರು ಇದನ್ನು ಕಂಡು ಪರಿಚಯದ ಸಮಾಜ ಸೇವಕರೋರ್ವರ ಮೂಲಕ ಇನ್ನೇನು ನದಿಗೆ ಹಾರುವಂತಿದ್ದ ಮಹಿಳೆಯನ್ನು ರಕ್ಷಿಸಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಒಟ್ಟಾರೆ ಮೂಕಪ್ರಾಣಿಯಾದ ನಾಯಿಯ ತುಡಿತ ಮತ್ತು ಪ್ರಯತ್ನ ಮಹಿಳೆಯನ್ನು ರಕ್ಷಿಸಲು ನೆರವಾದಂತಾಗಿದೆ.
ಬೆಂಗಳೂರು ಮೂಲದ ಈ ಮಹಿಳೆ ಅಲ್ಲಿಯೇ ಕೆಲಸ ಮಾಡುತ್ತಿದ್ದ ಪಿಲಿಗೂಡಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಪತಿಗೆ ದೊರಕಿದ ಪಿತ್ರಾರ್ಜಿತ ಆಸ್ತಿಯಲ್ಲಿ ವರ್ಷದ ಹಿಂದೆ ಮನೆ ಕಟ್ಟಿಕೊಂಡು ಇಬ್ಬರು ಮಕ್ಕಳೊಂದಿಗೆ ಸ್ವಾಭಿಮಾನದ ಜೀವನ ನಡೆಸುತ್ತಿದ್ದರು. ಅದುವರೆಗೆ 15 ವರ್ಷ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಕೆಲವು ದಿನಗಳಿಂದ ಮೆಕಾನಿಕ್ ವೃತ್ತಿಯ ಪತಿ ಮತ್ತು ಪತ್ನಿ ನಡುವೆ ವಿರಸ ಮೂಡಿತ್ತು. ಗುರುವಾರ ನೊಂದುಕೊಂಡ ಮಹಿಳೆ ಜೀವ ತ್ಯಜಿಸುವ ನಿರ್ಧಾರ ಮಾಡಿ
ನೇತ್ರಾವತಿ ಸೇತುವೆಗೆ ಆಗಮಿಸಿದ್ದರು. ಅವರನ್ನು ಹಿಂಬಾಲಿಸಿಕೊಂಡು ನಾಯಿ ಕೂಡ ಬಂದಿತ್ತು. ಮಹಿಳೆ ಸೇತುವೆಯ ಮೇಲೇರಲು ಯತ್ನಿಸುತ್ತಿದ್ದಂತೆ ನಾಯಿ ಅಪಾಯವನ್ನು ಅರಿತು ಚೂಡಿದಾರವನ್ನು ಕಚ್ಚಿ ಹಿಂದಕ್ಕೆ ಎಳೆಯುತ್ತಿದ್ದುದನ್ನು ಗಮನಿಸಿದ ಬೈಕ್ ಸವಾರ ಮತ್ತು ಯು.ಟಿ. ಫಯಾಜ್ ಅವರು ಕೂಡಲೇ ಮಹಿಳೆಯನ್ನು ಹಿಂದಕ್ಕೆಳೆದು ರಕ್ಷಿಸಿದರು.
Related Articles
ಶುಕ್ರವಾರ ದಿನವಿಡೀ ರಾಜೀ ಮಾತುಕತೆ ನಡೆಯಿತಾದರೂ ಮಹಿಳೆ ಗಂಡನ ಮನೆಗೆ ಹೋಗಲು ನಿರಾಕರಿಸಿದರು. ಪೊಲೀಸರು ಮತ್ತು ಸ್ಥಳೀಯರು ಮನವೊಲಿಕೆಗೆ ಸಾಕಷ್ಟು ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ. ಪ್ರಸ್ತುತ ಅವರು ಟೈಲರಿಂಗ್ ಕಲಿಯುತ್ತಿದ್ದ ಗೆಳತಿಯ ಮನೆಯಲ್ಲಿದ್ದು, ಶನಿವಾರ ಬೆಂಗಳೂರಿನ ತಾಯಿ ಮನೆಯಿಂದ ಕರೆದೊಯ್ಯಲು ಬರುವುದಾಗಿ ತಿಳಿದುಬಂದಿದೆ. ಇಬ್ಬರು ಮಕ್ಕಳು ಅಪ್ಪನೊಂದಿಗೆ ಇರುವುದಾಗಿ ತಿಳಿಸಿರುವರು.
Advertisement