Advertisement

ಉಪ್ಪಿನಂಗಡಿಯಲ್ಲಿ ಸಹೋದರರ ಅಪಹರಣ ಪ್ರಕರಣ: ಹಣಕ್ಕಾಗಿ ತಮ್ಮನ ಒತ್ತೆ; ಅಣ್ಣ ಮನೆಗೆ

12:36 AM Jan 21, 2023 | Team Udayavani |

ಉಪ್ಪಿನಂಗಡಿ : ವಿದೇಶದಿಂದ ಬಂದವರಿಂದ ಹಣವನ್ನು ಕಬಳಿಸುವ ಸಲುವಾಗಿ ಸಹೋದರರಿಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳು ಅವರಲ್ಲಿ ತಮ್ಮನನ್ನು ಒತ್ತೆ ಇರಿಸಿಕೊಂಡು ಹಣ ತರುವಂತೆ ಬೇಡಿಕೆಯಿಟ್ಟು ಅಣ್ಣನನ್ನು ಮನೆಗೆ ಕಳುಹಿಸಿದ ಬಗ್ಗೆ ಉಪ್ಪಿನಂಗಡಿ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಈ ಪ್ರಕರಣಕ್ಕೆ ಸಂಬಂಧಿಸಿ ಕೊçಲದ ಕೆ.ಸಿ. ಫಾರ್ಮ್ ಬಳಿಯ ನಿಜಾಮುದ್ದೀನ್‌ ಅವರು ಆರೋಪಿ ಗಳಾದ ಸಿದ್ದಿಕ್‌ ಜೆಸಿಬಿ ಕರುವೇಲು, ಇರ್ಷಾದ್‌ ಮಠ, ಶಾಫಿ ಗಡಿಯಾರ, ಅನ್ಸಾರ್‌ ಕೆಮ್ಮಾರ ಹಾಗೂ ಇತರರ ಮೇಲೆ ದೂರು ನೀಡಿದ್ದಾರೆ.

ಗುರುವಾರ ನಿಜಾಮುದ್ದೀನ್‌ ಅವರಿಗೆ ಪರಿಚಯದ ಸಿದ್ದಿಕ್‌ ಕರೆ ಮಾಡಿ ಕೆಲಸವಿದೆ. ನೀನು ಗಾಂಧಿಪಾರ್ಕ್‌ಗೆ ಬಾ ಎಂದು ತಿಳಿಸಿದ್ದ. ಅದರಂತೆ ಅಲ್ಲಿಗೆ ತೆರಳಿದಾಗ ಅಲ್ಲಿ ಪರಿಚಯದ ಅನ್ಸಾರ್‌ ಕೆಮ್ಮಾರ ಎಂಬವರ ಕಾರಿನಲ್ಲಿ ಸಿದ್ದಿಕ್‌ ಜೆಸಿಬಿ ಕರುವೇಲು, ಶಾಫಿ ಗಡಿಯಾರ, ಇರ್ಷಾದ್‌ ಮಠ ಎಂಬವರಿದ್ದು, ಪೆರ್ನೆ ಕಡೆ ಕೆಲಸಕ್ಕೆ ಹೋಗುವ ಎಂದು ನಿಜಾಮುದ್ದೀನ್‌ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ತೆರಳಿದ್ದರು. ದಾರಿ ಮಧ್ಯೆ ಅಪರಿಚಿತ ವ್ಯಕ್ತಿಯೋರ್ವ ಕಾರು ಹತ್ತಿದ್ದು, ಮಲ್ಲೂರಲ್ಲಿ ಕಾರನ್ನು ನಿಲ್ಲಿಸಿ ಮನೆಯೊಳಗೆ ನಿಜಾಮುದ್ದೀನ್‌ ಅವರೊಂದಿಗೆ ಹೋದರು. ಮನೆಯಲ್ಲಿದ್ದ ಅಪರಿಚಿತರೆಲ್ಲ ನಿಜಾಮುದ್ದೀನ್‌ರಲ್ಲಿ ವಿದೇಶದಿಂದ ಬಂದ ನಿನ್ನ ತಮ್ಮ ಶಾರೂಕ್‌ ಎಲ್ಲಿದ್ದಾನೆ? ಎಂದು ಕೇಳಿದ್ದಲ್ಲದೆ, ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಅವರ ಮೊಬೈಲ್‌  ಕಿತ್ತುಕೊಂಡು ತಮ್ಮ ಶಾರೂಕ್‌ಗೆ ಕರೆ ಮಾಡಿ ಕಡಂಬು ಎಂಬಲ್ಲಿಗೆ ಬರಲು ಹೇಳಿದರು.

ನಿಜಾಮುದ್ದೀನ್‌ ಅವರನ್ನು ಕಡಂಬುಗೆ ಕರೆದುಕೊಂಡು ಬಂದಿದ್ದರು. ಆಗ ಅಲ್ಲಿಗೆ ಬಂದ ಶಾರೂಕ್‌ ಹಾಗೂ ಆತನ ಜತೆಗಿದ್ದ ಫೈಝಲ್‌ ಎಂಬವರನ್ನು ಕಾರಿನಲ್ಲಿ ಕುಳ್ಳಿರಿಸಿ, ಮತ್ತೆ ಮಲ್ಲೂರಿನ ಮನೆಗೆ ಕರೆದುಕೊಂಡು ಹೋಗಿ ಶಾರೂಕ್‌ ನಿಗೂ ಹಲ್ಲೆ ನಡೆಸಿದ್ದರು. ಬಳಿಕ ಶಾರೂಕ್‌ನನ್ನು ಒತ್ತೆ ಇರಿಸಿಕೊಂಡ ಆರೋಪಿಗಳು ನಿಜಾಮುದ್ದೀನ್‌ರಲ್ಲಿ 4 ಲಕ್ಷ ರೂ. ಹಣ ತಂದರೆ ಮಾತ್ರ ನಿನ್ನ ತಮ್ಮನನ್ನು ಬಿಡುತ್ತೇವೆ ಎಂದು ಹೇಳಿ ಆರೋಪಿ ಅನ್ಸಾರ್‌ ಕೆಮ್ಮಾರನ ಕಾರಿನಲ್ಲಿ ನಿಜಾಮುದ್ದೀನ್‌ ಹಾಗೂ ಫೈಝಲ್‌ನನ್ನು ಮನೆಗೆ ಕಳುಹಿಸಿದ್ದರು. ಮನೆ ತಲುಪಿದ ನಿಜಾಮುದ್ದೀನ್‌ ನಡೆದ ಘಟನೆಯನ್ನು ತಾಯಿಯಲ್ಲಿ ಹೇಳಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜ.20ರಂದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಗಳು ಹಣ ಸುಲಿಗೆ ಮಾಡುವ ಉದ್ದೇಶದಿಂದ ತಮ್ಮನ್ನು ಅಪಹರಿಸಿ, ಹಲ್ಲೆ ನಡೆಸಿದ್ದು, ತಮ್ಮನನ್ನು ಒತ್ತೆ ಇರಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಒತ್ತೆಯಾಳುವಿನ ಪತ್ತೆಗೆ ಕಾರ್ಯಾ ಚರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next