ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ಎಂಬಲ್ಲಿ ರಾ. ಹೆ. 75ರಲ್ಲಿ ಕಬ್ಬಿಣದ ಸರಳುಗಳನ್ನು ಹೊತ್ತೂಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದ ಕಾರಣ ಹೆದ್ದಾರಿ ಸಂಚಾರ ಮೂರು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಈ ಲಾರಿಯು ಹೊಸಮಜಲು ಎಂಬಲ್ಲಿ ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದಿದೆ. ಇದರಿಂದಾಗಿ ಹೆದ್ದಾರಿ ಸಂಚಾರ ತಡೆ ಹಿಡಿಯಲ್ಪಟ್ಟಿದ್ದು, ಪೊಲೀಸರು ವಾಹನಗಳನ್ನು ನೆಲ್ಯಾಡಿ – ಪುತ್ಯೆ ಕೊಕ್ಕಡ ಮಾರ್ಗವಾಗಿ ಪೆರಿಯಶಾಂತಿಯ ಮೂಲಕ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಾರೆ.
ಘಟನೆ ಸಂಭವಿಸಿದಾಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರೇನ್ ಮೂಲಕ ಲಾರಿಯನ್ನು ಹೆದ್ದಾರಿಯಿಂದ ಬದಿಗೆ ಸರಿಸುವ ಕಾರ್ಯಾಚರಣೆ ಕೈಗೊಂಡರು. ಮೂರು ಗಂಟೆಗಳ ಬಳಿಕ ಹೆದ್ದಾರಿ ಸಂಚಾರವನ್ನು ಪುನರಾರಂಭಗೊಂಡಿತು. ಲಾರಿ ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.