Advertisement

ಉಪ್ಪಿನಕುದ್ರು: ಉಪ್ಪು ನೀರು ತಡೆಗೆ ದಂಡೆ ನಿರ್ಮಾಣ

12:21 AM Jan 19, 2020 | mahesh |

ತಲ್ಲೂರು: ಉಪ್ಪಿನಕುದ್ರುವಿನಲ್ಲಿರುವ ಮಾರನಮನೆ ಪ್ರದೇಶದ ನೂರಾರು ಮಂದಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನದಿ ದಂಡೆ ಸಂರಕ್ಷಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ 2 ಕೋ.ರೂ. ಸಣ್ಣ ಅನುದಾನ ಮಂಜೂರಾಗಿದೆ. ಈಗಾಗಲೇ ಕಾಮಗಾರಿ ಕೂಡ ಆರಂಭಗೊಂಡಿದ್ದು, ಈ ವರ್ಷದ ಎಪ್ರಿಲ್‌ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Advertisement

ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರು ಸಮೀಪದ ಮಾರನ ಮನೆ ಪ್ರದೇಶದಲ್ಲಿ 2 ಕೋ.ರೂ. ವೆಚ್ಚದಲ್ಲಿ ಸುಮಾರು 2,450 ಮೀಟರ್‌ ಉದ್ದದ ನದಿ ದಂಡೆ ನಿರ್ಮಾಣವಾಗಲಿದೆ. ಇದು ಮಾರನಮನೆಯ ಸಂಸಾಲ್‌ಕಟ್ಟೆಯಿಂದ ಆರಂಭವಾಗಿ ತಲ್ಲೂರು – ಹೆಮ್ಮಾಡಿ ಮಧ್ಯೆಯಿರುವ ರಾಜಾಡಿ ಸೇತುವೆಯವರೆಗೆ ಈ ನದಿ ದಂಡೆ ನಿರ್ಮಾಣವಾಗಲಿದೆ.

ವಿಸ್ತರಣೆಗೆ ಶಾಸಕರ ಸೂಚನೆ
ಮೊದಲಿಗೆ ಇಲ್ಲಿ ಕೇವಲ 750 ಮೀಟರ್‌ ಮಾತ್ರ ನದಿ ದಂಡೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು. ಆದರೆ ಇದರಿಂದ ಅಷ್ಟೇನೂ ಪ್ರಯೋಜನ ವಾಗುವುದಿಲ್ಲ ಎನ್ನುವ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು 750 ಮೀ.ನಿಂದ 2,450 ಮೀ. ವರೆಗೆ ವಿಸ್ತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅನೇಕ ವರ್ಷಗಳ ಬೇಡಿಕೆ
ಇಲ್ಲಿ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದರಿಂದ ಭತ್ತ, ಕಬ್ಬು ಮತ್ತಿತರ ಕೃಷಿ ಬೆಳೆಗಳಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ನದಿ ದಂಡೆ ನಿರ್ಮಾಣ ಮಾಡಬೇಕು ಎನ್ನುವುದು ಇಲ್ಲಿನ ರೈತರ ಅನೇಕ ವರ್ಷಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಈಗ ಕಾಮಗಾರಿಗೆ ಚಾಲನೆ ದೊರೆತಿದ್ದು, ಆ ಮೂಲಕ ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯೊಂದು ಈಡೇರುತ್ತಿದೆ.

ಹತ್ತಾರು ಎಕರೆಗೆ ಅನುಕೂಲ
ಉಪ್ಪಿನಕುದ್ರು ಭಾಗದಲ್ಲಿನ ರೈತರಿಗೆ ಕೃಷಿಗೆ ಪ್ರಮುಖವಾಗಿ ಸಮಸ್ಯೆ ಇರುವುದೇ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುವುದು. ಈ ಸಮಸ್ಯೆಗೆ ಹೈರಾಣಾಗಿ ಹೋಗಿರುವ ಇಲ್ಲಿನ ಹೆಚ್ಚಿನ ರೈತರು ಬೇಸಾಯದಿಂದಲೇ ವಿಮುಖರಾಗುವತ್ತ ಹೆಜ್ಜೆಯಿಟ್ಟಿದ್ದರು. ಉಪ್ಪು ನೀರಿನ ಸಮಸ್ಯೆಗೆ ಪರಿಹಾರ ಎನ್ನುವಂತೆ ಈ ನದಿ ದಂಡೆ ಸಂರಕ್ಷಣ ಕಾಮಗಾರಿಗೆ 2 ಕೋ.ರೂ. ಅನುದಾನ ಮಂಜೂರಾಗಿ, ಕಾಮಗಾರಿಯೂ ಆರಂಭಗೊಂಡಿದೆ. ಇದರಿಂದ ಈ ಭಾಗದ 100ಕ್ಕೂ ಮಿಕ್ಕಿದ ರೈತರ 25-30 ಎಕರೆ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ.

Advertisement

ಭತ್ತ, ಕಬ್ಬು ಬೆಳೆಗೆ ಸಹಕಾರಿ
ಮಾರನಮನೆ ಬಳಿಯ ನದಿ ದಂಡೆ ನಿರ್ಮಾಣದಿಂದಾಗಿ ಈ ಭಾಗದ ರೈತರಿಗೆ ಭತ್ತ, ಕಬ್ಬು, ಧಾನ್ಯ, ತರಕಾರಿ ಕೃಷಿ ಮಾಡಲು ಅನುಕೂಲವಾಗಲಿದೆ. ಹಿಂದೆ ಉಪ್ಪು ನೀರಿನ ಸಮಸ್ಯೆಯಿಂದಾಗಿ ಮುಂಗಾರು ಕೃಷಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಈಗ ನದಿ ದಂಡೆ ಸಂಕ್ಷರಣೆಯಿಂದಾಗಿ ಮುಂಗಾರು ಕೃಷಿಯೊಂದಿಗೆ ಹಿಂಗಾರು ಹಂಗಾಮಿಗೂ ರೈತರಿಗೆ ಪ್ರಯೋಜನವಾಗಲಿದೆ.
-ಚಂದ್ರ ದೇವಾಡಿಗ, ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next