Advertisement
ತಲ್ಲೂರು: ಉಪ್ಪಿನಕುದ್ರು ಎನ್ನುವ ಪುಟ್ಟ ಊರಿಗೆ ಯಕ್ಷಗಾನ ಬೊಂಬೆಯಾಟದ ಮೂಲಕ ರಾಷ್ಟ್ರಮಟ್ಟದ ಮನ್ನಣೆ ತಂದುಕೊಟ್ಟ ಕೊಗ್ಗ ಕಾಮತ್ ಅವರಂತಹ ಹತ್ತಾರು ಮಂದಿ ಮಹನೀಯರು ಕಲಿತ ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಈಗ 101 ವರ್ಷ.
ಹಿಂದೆ ಸಾವಿರಾರು ಮಂದಿ ವಿದ್ಯಾರ್ಜನೆಗೈದ ಈ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 1 ರಿಂದ 7ನೇ ತರಗತಿಯವರೆಗೆ 125 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸದ್ಯ ನಾಲ್ವರು ಶಿಕ್ಷಕರಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದ ಗೋಪಾಲಕೃಷ್ಣ ಅವರು ಕೆಲವು ತಿಂಗಳ ಹಿಂದೆ ನಿವೃತ್ತಿಯಾಗಿದ್ದು, ಆ ಹುದ್ದೆ ಖಾಲಿಯಿದೆ. ಹಿರಿಯ ಶಿಕ್ಷಕಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ.
Related Articles
ಈ ಶಾಲೆಯಲ್ಲಿ ಕಲಿತ ಅನೇಕ ಮಂದಿ ಇಂದು ಸಮಾಜದ ಉನ್ನತ ರಂಗಗಳಲ್ಲಿ ತೊಡಗಿಸಿಕೊಂಡಿರುವುದು ವಿಶೇಷ. ಬೊಂಬೆಯಾಟದ ಕೊಗ್ಗ ಕಾಮತ್, ಭಾಸ್ಕರ್ ಕಾಮತ್, ಪ್ರತಿಷ್ಠಿತ ಹೊಟೇಲ್ ಉದ್ಯಮಿಗಳಾದ ಸುರೇಶ್ ಕಾಂಚನ್ ಮುಂಬಯಿ, ರಮೇಶ್ ಯು., ಚಿತ್ರದುರ್ಗದಲ್ಲಿ ಡಿವೈಎಸ್‌ಪಿ ಯಾಗಿರುವ ನಾಗೇಶ್ ನಾಯಕ್, ಪ.ಪೂ. ಶಿಕ್ಷಣ ಇಲಾಖೆಯ ಸಹ ನಿರ್ದೇಶಕರಾಗಿದ್ದ ರಾಘವೇಂದ್ರ ಐತಾಳ್, ಕುಂದಾಪುರ ಬೋರ್ಡ್ ಹೈಸ್ಕೂಲಿನಲ್ಲಿ ಪ್ರಾಂಶುಪಾಲರಾಗಿದ್ದ ದಿ| ನಾಗಪ್ಪಯ್ಯ ಐತಾಳ್, ದಿ| ರಾಮಕೃಷ್ಣ ಐತಾಳ್, ಧಾರ್ಮಿಕ, ಬ್ಯಾಂಕಿಂಗ್, ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡ ರಮೇಶ್ ಕಾರಂತ್, ರಾಜೇಶ್ ಕಾರಂತ್, ಸುರೇಶ್ ಉಡುಪ, ರಾಜಾರಾಂ ಹೊಳ್ಳ, ಸದಾನಂದ ಉಪ್ಪಿನಕುದ್ರು, ಆನಂದ ಬಿಲ್ಲವ ಸೇರಿದಂತೆ ಅನೇಕರು ಇಲ್ಲಿನ ಹಳೆ ವಿದ್ಯಾರ್ಥಿಗಳು.
Advertisement
ರಾಷ್ಟ್ರಪ್ರಶಸ್ತಿಈ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅನಂತ ಮಯ್ಯ ಅವರಿಗೆ ಉತ್ತಮ ಶಿಕ್ಷಕ ಎನ್ನುವ ರಾಷ್ಟ್ರ ಪ್ರಶಸ್ತಿ ಅರಸಿಕೊಂಡು ಬಂದಿತ್ತು. ಇನ್ನು ಇಲ್ಲಿ ಕಲಿತು ಶಿಕ್ಷಣ ರಂಗದ ಗಣನೀಯ ಸಾಧನೆಗಾಗಿ ದಿ| ನಾಗಪ್ಪಯ್ಯ ಐತಾಳ್ ಅವರಿಗೆ ಕೂಡ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಸರಕಾರದ ಅನುದಾನದ ಜತೆಗೆ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ, ಊರಿನ ದಾನಿಗಳು, ಇಲ್ಲಿ ಕಲಿತ ಅನೇಕ ಮಂದಿ ವಿದ್ಯಾರ್ಥಿಗಳ ನೆರವಿನಿಂದ ಈ ಶಾಲೆ ಬಹಳಷ್ಟು ಅಭಿವೃದ್ಧಿ ಕಂಡಿದ್ದು, ಜತೆಗೆ ಗುಣಮಟ್ಟದ ಶಿಕ್ಷಣವನ್ನು ಕೂಡ ನೀಡುತ್ತಿದೆ. ಮಕ್ಕಳಿಗೆ ಆಟವಾಡಲು ಮೈದಾನವೊಂದರ ಅಗತ್ಯವಿದೆ.
-ಕೆ. ಶಕುಂತಳಾ,(ಪ್ರಭಾರ ) ಮುಖ್ಯ ಶಿಕ್ಷಕಿ ನಾನು ಉಪ್ಪಿನಕುದ್ರು ಶಾಲೆಯ ವಿದ್ಯಾರ್ಥಿ ಎಂಬ ಹೆಮ್ಮೆಯಿದೆ. ಆಗ ಕಡು ಬಡತನದಲ್ಲಿ ಕಲಿತಿದ್ದು, ಶಾಲೆಗೆ ಹೋಗಲು ಸರಿಯಾದ ಬಟ್ಟೆಗಳಿರಲಿಲ್ಲ. ಬೇರೆಯವರು ಬಳಸಿದ ಬಟ್ಟೆ, ಪುಸ್ತಕಗಳನ್ನು ಉಪಯೋಗಿಸಿ ಕಲಿತಿದ್ದೆವು. ಆ ಕಷ್ಟದ ಅರಿವಿರುವುದರಿಂದ ಕಳೆದ 14 ವರ್ಷಗಳಿಂದ ಈ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಪ್ರತಿ ವರ್ಷ ಪುಸ್ತಕ, ವಿದ್ಯಾರ್ಥಿವೇತನ ನೀಡುತ್ತಿದ್ದೇನೆ. 7ನೇ ತರಗತಿಯಲ್ಲಿದ್ದಾಗ ನಾನು ಕೃಷಿ ಮಂತ್ರಿಯಾಗಿದ್ದೆ.
-ಸುರೇಶ್ ಆರ್. ಕಾಂಚನ್ ಮುಂಬಯಿ,
ಪ್ರತಿಷ್ಠಿತ ಹೊಟೇಲ್ ಉದ್ಯಮಿ - ಪ್ರಶಾಂತ್ ಪಾದೆ