Advertisement

ಮೇಲೆ ಸಂಚಾರ; ಕೆಳಗೆ ನಿಲುಗಡೆ!

10:47 AM Dec 14, 2019 | Suhan S |

ಬೆಂಗಳೂರು: ನಗರದ ಮೇಲ್ಸೇತುವೆ ಮತ್ತು ಎತ್ತರಿಸಿದ ಪಾದಚಾರಿ ಮಾರ್ಗಗಳು ವಾಹನ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಇದು ಸಂಚಾರದಟ್ಟಣೆಗೆ ಎಡೆಮಾಡಿಕೊಡುತ್ತಿದ್ದು, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿದೆ.

Advertisement

ದುರಸ್ತಿಗೆ ಬಂದ ಕಾರು, ಬೈಕ್‌ಗಳು, ಪೊಲೀಸರು ಜಪ್ತಿ ಮಾಡಿದ ವಾಹನಗಳು, ಅಪಘಾತದಲ್ಲಿ ವಶಕ್ಕೆ ಪಡೆದ ವಾಹನಗಳು, ಆ್ಯಪ್‌ ಆಧಾರಿತ ಬೈಕ್‌ಗಳು ಇವೆಲ್ಲವುಗಳ ನಿಲುಗಡೆಗೆ ನಗರದ ಮೇಲ್ಸೇತುವೆ ಜಂಕ್ಷನ್‌ ಗಳು ಮತ್ತು ಸ್ಕೈವಾಕ್‌ಗಳ ಕೆಳಗೆ ಪ್ರಶಸ್ತವಾದ ತಾಣಗಳಾಗುತ್ತಿವೆ. ಇವು ನಿತ್ಯ ಆಯಾ ಮಾರ್ಗದಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಬ್ರೇಕ್‌ ಹಾಕುತ್ತಿವೆ. ಈ ಸಂಬಂಧ ಸವಾರರಿಂದ ದೂರುಗಳು ಕೂಡ ಕೇಳಿಬರುತ್ತಿವೆ.

ನಗರದ ಕಿರಿದಾದ ರಸ್ತೆಗಳು ಹಾಗೂ ಪಾರ್ಕಿಂಗ್‌ಗೆ ಪರ್ಯಾಯ ವ್ಯವಸ್ಥೆ ಇಲ್ಲದ ಬಹುತೇಕ ಪ್ರದೇಶಗಳಲ್ಲಿ ವಾಹನಗಳ ನಿಲುಗಡೆ ಸಮಸ್ಯೆ ಉಂಟಾಗಿದೆ. ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟಿಕ್‌ ಭಾಗ, ಹೆಬ್ಟಾಳ, ಕೋರಮಂಗಲ, ಮೈಸೂರು ರಸ್ತೆ ಮತ್ತಿತರ ಕಡೆಗಳಲ್ಲಿ ಇರುವ ಮೇಲ್ಸೇತುವೆ ಜಂಕ್ಷನ್‌ ಕೆಳಗೆ ಹೆಚ್ಚಾಗಿ ಈ ಪ್ರವೃತ್ತಿ ಕಂಡುಬರುತ್ತಿದೆ.

ಬಿಎಂಟಿಸಿ ಬಸ್‌ ನಿಲ್ದಾಣ, ಪಾದಚಾರಿ ಮಾರ್ಗ ಹಾಗೂ ರಸ್ತೆಗಳ ಪಾರ್ಶ್ವಗಳಲ್ಲೂ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಅಲ್ಲದೆ, ಆ್ಯಪ್‌ ಆಧಾರಿತ ವಾಹನ ಸವಾರರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವುದು ಸರ್ವೇಸಾಮಾನ್ಯವಾಗಿದೆ. ರಸ್ತೆ ಜಾಗವನ್ನು ಇವು ಆಕ್ರಮಿಸಿಕೊಳ್ಳುವುದರಿಂದ ಉಳಿದ ವಾಹನ ಗ ಳಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸುತ್ತಾರೆ.

ಈ ರೀತಿ ಕಾನೂನು ಉಲ್ಲಂಘನೆ ಮಾಡುವವರ ಮೇಲೆ ಸಂಚಾರ ಪೊಲೀಸರು ದಂಡ ಪ್ರಯೋಗಿಸುತ್ತಿದ್ದರೂ ಇವುಗಳ ಹಾವಳಿ ನಿಂತಿಲ್ಲ ಎಂದು ಸ್ವತಃ ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದ್ದು, “ಸಾರ್ವಜನಿಕರು ಬಳಸುವ ಆ್ಯಪ್‌ ಆಧಾರಿತ ಮತ್ತು ಕೆಟ್ಟುನಿಲ್ಲುವ ವಾಹನಗಳನ್ನು ರಸ್ತೆ ಬದಿ, ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ ಗಳ ಕೆಳಗೆ ನಿಲ್ಲಿಸುತ್ತಿದ್ದು, ಈ ಬಗ್ಗೆ ಕ್ರಮ ತೆಗೆದುಕೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ’ ಈಚೆಗೆ ನಗರ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

Advertisement

ಸ್ಥಳಾಂತರ ಮಾಡಲಾಗಿದೆ: ಅಪಘಾತ, ಕಳವು ಹಾಗೂ ವಿವಿಧ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸಂಚಾರ ಪೊಲೀಸರು ವಶಪಡಿಸಿಕೊಂಡ ವಾಹನಗಳಿಂದಲೂ ಸುಗಮ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಅಲ್ಲದೆ, ಪೊಲೀಸ್‌ ಠಾಣೆಗಳ ಮುಂಭಾಗದ ರಸ್ತೆಗಳಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಜಪ್ತಿ ವಾಹನಗಳನ್ನು ಸ್ಥಳಾಂತರ ಮಾಡುವುದಕ್ಕೆ

ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಜಪ್ತಿ ಮಾಡಲಾಗಿರುವ ಮೂರು ಸಾವಿರ ವಾಹನಗಳನ್ನು ಜಕ್ಕರಾಯನ ಕೆರೆ ವ್ಯಾಪ್ತಿಯಲ್ಲಿರುವ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತರಾದ ಬಿ.ಆರ್‌. ರವಿಕಾಂತೇಗೌಡ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಅಲ್ಲದೆ, ಜಪ್ತಿ ಮಾಡಲಾಗಿರುವ ವಾಹನಗ ಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡುವುದಕ್ಕೂ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬಿಬಿಎಂಪಿ ಬಿಂಗೀಪುರದಲ್ಲಿ ಜಪ್ತಿ ವಾಹನಗಳಿಗೆ ಜಾಗ ನೀಡುವುದಾಗಿ ಹೇಳಿದೆ. ಸದ್ಯ ಅಲ್ಲಿ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಳ್ಳುತ್ತಿದ್ದಂತೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next