Advertisement

ಮತ ಬುಟ್ಟಿ ತುಂಬಿಸುವ ಕೃಷ್ಣಾ ಮೇಲ್ದಂಡೆ

12:20 AM Feb 21, 2023 | Team Udayavani |

ಹುಬ್ಬಳ್ಳಿ:ಆಲಮಟ್ಟಿ ಜಲಾಶಯ ನಿರ್ಮಾಣದಿಂದ ಹಿಡಿದು ಕೃಷ್ಣಾ ಮೇಲ್ಡಂಡೆ ಯೋಜನೆ 3ನೇ ಹಂತದವರೆಗೂ ಒಟ್ಟಾರೆ ಯೋಜನೆ ಚುನಾವಣೆ ಬಂದಾಗಲೊಮ್ಮೆ ರಾಜಕೀಯ ಪಕ್ಷಗಳಿಗೆ ಬಳಕೆಯ ಅಸ್ತ್ರವಾಗುತ್ತ ಬಂದಿದೆ. ಯುಕೆಪಿ-3 ಯೋಜನೆ ಆಡಳಿತ ಪಕ್ಷಕ್ಕೆ ಭರವಸೆಯ ಅಸ್ತ್ರವಾದರೆ, ವಿಪಕ್ಷಗ ಳಿಗೆ ಟೀಕಾಸ್ತ್ರ-ಹೋರಾಟ ಅಸ್ತ್ರವಾಗಿ ಬಳಕೆ ಆಗುತ್ತಲೇ ಬಂದಿದೆಯಾದರೂ ಇದುವರೆಗೂ ಕನಿಷ್ಠ ಪ್ರಮಾಣದ ಫಲ ನೀಡುವ ಕಾರ್ಯ ಮಾಡಿಲ್ಲ.
ಚುನಾವಣೆ ವೇಳೆ ಪ್ರಮುಖ ಅಸ್ತ್ರವಾಗಿ ಪರಿಣ ಮಿಸುವ ಯುಕೆಪಿ, ಅನಂತರ ಮೌನಕ್ಕೆ ಜಾರುತ್ತದೆ. ಅಡಿಗಲ್ಲು ಕಂಡ ಸುಮಾರು 40 ವರ್ಷ ಗಳ ಅನಂತರ ಪೂರ್ಣಗೊಂಡ ಖ್ಯಾತಿ ಆಲಮಟ್ಟಿ ಜಲಾಶ ಯಕ್ಕೆ ಇದೆ.ಅದೇ ರೀತಿ ಹಂಚಿಕೆ ಯಾದ ನೀರು ಬಳಕೆಯಲ್ಲಿಯೂ ಉದಾಸೀನತೆ ತೋರಿದ ಇತಿಹಾಸವಿದೆ. ಜಲಾಶಯ ಎತ್ತರ ಹೆಚ್ಚಳಕ್ಕೆ ನ್ಯಾಯಾ ಧೀಕರಣ ಒಪ್ಪಿಗೆ ನೀಡಿದ್ದರೂ ಇಂದಿಗೂ ಸಣ್ಣ ಕ್ರಮವೂ ಇಲ್ಲವಾಗಿದೆ.

Advertisement

ಕೃಷ್ಣಾ ನದಿ ನೀರು ಹಂಚಿಕೆಯ ನ್ಯಾ|ಬಚಾವತ್‌ ನೇತೃತ್ವದ ನ್ಯಾಯಾಧೀಕರಣ 1976ರಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ ನೀರು ಹಂಚಿಕೆ ಮಾಡಿದ್ದರೂ ಸರಿ ಸುಮಾರು ಎರಡೂವರೆ ದಶಕಗಳ ಬಳಿಕ ರಾಜ್ಯದಲ್ಲಿ ಎ ಸ್ಕೀಂ ಅಡಿಯ ನೀರು ಬಳಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿತ್ತು. ನ್ಯಾ|ಬ್ರಿಜೇಶ ಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣ 2013ರಲ್ಲಿಯೇ ತೀರ್ಪು ನೀಡಿ, ಆಲಮಟ್ಟಿ ಜಲಾಶಯ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಲು ಒಪ್ಪಿಗೆ ನೀಡಿ ದಶಕ ಕಳೆದರೂ ಯಾವುದೇ ಕ್ರಮ ಇಲ್ಲವಾಗಿದೆ.

ಚುನಾವಣೆ ಕಾಲಕ್ಕೆ ಸದ್ದು: ಸುಮಾರು 15 ಲಕ್ಷ ಎಕರೆ ಭೂಮಿಗೆ ನೀರುಣಿಸುವ ಸಾಮರ್ಥ್ಯ ಹೊಂದಿ ರುವ ಕೃಷ್ಣಾ ಮೇಲ್ದಂಡೆ ಯೋಜನೆ ಉದಾ ಸೀನ, ನಿರ್ಲಕ್ಷé ಸಿಲುಕುತ್ತಲೇ ಬಂದಿದೆ. ಕಳೆದ ಎರಡು ದಶಕಗಳಿಂದ ಚುನಾವಣೆ ಕಾಲಕ್ಕೆ ಯುಕೆಪಿ ತನ್ನದೇ ನಿಟ್ಟಿನಲ್ಲಿ ಸದ್ದು ಮಾಡುತ್ತದೆ. ರಾಜ್ಯದ ಪ್ರಮುಖ ಮೂರು ಪಕ್ಷಗಳು ಚುನಾವಣೆ ಕಾಲಕ್ಕೆ ಯುಕೆಪಿಯನ್ನು ಬಳಕೆ ಮಾಡುತ್ತಲೇ ಬಂದಿವೆ. ಯುಕೆಪಿ-3 ಯೋಜನೆ ಕಳೆದೆರಡು ಚುನಾವಣೆ ಗಳಿಂದ ಈ ಭಾಗದ ಪ್ರಮುಖ ವಿಷಯವಾಗಿದ್ದರೂ ಪರಿಹಾರ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿಲ್ಲ.

ನ್ಯಾ|ಬ್ರಿಜೇಶ ಕುಮಾರ ನೇತೃತ್ವದ ನ್ಯಾಯಾಧೀಕರಣ ಕರ್ನಾಟಕಕ್ಕೆ ಸುಮಾರು 100 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿದ್ದು, ಜಲಾಶಯ ಎತ್ತರದ ಹಿನ್ನೀರಿನಿಂದ ಸುಮಾರು 22 ಗ್ರಾಮಗಳು ಹಾಗೂ ಸುಮಾರು ಒಂದು ಲಕ್ಷ ಎಕರೆಯಷ್ಟು ಭೂಮಿ ಮುಳುಗಡೆ ಆಗಲಿದ್ದು, ಸಂತ್ರಸ್ತರಿಗೆ ಪುನರ್‌ ವಸತಿ, ಪುನರ್‌ ನಿರ್ಮಾಣ, ಭೂಮಿ ನೀಡಿಕೆ ಹಾಗೂ ಇತರೆ ಕಾಮಗಾರಿಗೆ ಅಂದಾಜು 60-70 ಸಾವಿರ ಕೋಟಿ ರೂ.ಗಳ ವೆಚ್ಚ ಆಗಲಿದೆ. ಇದರ ಮೇಲೆ ಯಾವುದೇ ಕ್ರಮ ಆಗಿಲ್ಲ.

ಕಾಂಗ್ರೆಸ್‌ ಭರವಸೆ ಹುಸಿ: ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಯುಕೆಪಿ ವಿಚಾರವನ್ನು ತಮ್ಮ ಚುನಾವಣ ಅಸ್ತ್ರವಾಗಿ ಬಳಕೆ ಮಾಡುತ್ತಲೇ ಬಂದಿವೆ. ವಿಪಕ್ಷದಲ್ಲಿದ್ದಾಗ ಹೋರಾಟಕ್ಕಿಳಿಯುವ, ಭರವಸೆ ನೀಡುವ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಆದನ್ನು ಮರೆಯುವ ಕಾರ್ಯ ಮಾಡುತ್ತಿವೆ. 2013ರ ಸಂದರ್ಭದಲ್ಲಿ ನಮ್ಮ ನಡಿಗೆ ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್‌, ಅಧಿಕಾರಕ್ಕೆ ಬಂದರೆ ವರ್ಷಕ್ಕೆ 10 ಸಾವಿರ ಕೋಟಿ ರೂ.ಗಳ ಅನುದಾನ ನೀಡಿ ಐದು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿತ್ತು. ಐದು ವರ್ಷದ ಅಧಿಕಾರ ಮುಗಿಸಿದರೂ ಯಾವುದೇ ಫಲ ಜನರಿಗೆ ಕಾಣಲಿಲ್ಲ. ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನು 2018ರಲ್ಲಿ ನೀಡಿತ್ತಾದರೂ, ಇದೀಗ ಬಿಜೆಪಿ ಅಧಿಕಾರದಲ್ಲಿದ್ದು, ಆ ನಿಟ್ಟಿನಲ್ಲಿ ಸಣ್ಣ ಯತ್ನವೂ ಆಗಿಲ್ಲ. ಯುಕೆಪಿ-3ನೇ ಹಂತದ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯಾಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು ಅದೂ ಆಗಿಲ್ಲ.

Advertisement

ಇದೀಗ ಮತ್ತೊಮ್ಮೆ ಚುನಾವಣೆ ಬಂದಿದ್ದು, ಕಾಂಗ್ರೆಸ್‌ ಈಗಾಗಲೇ ವಿಜಯಪುರದಲ್ಲಿ ಯುಕೆಪಿ-3 ನೇ ಹಂತದ ಯೋಜನೆ ಜಾರಿ ವಿಳಂಬ ಖಂಡಿಸಿ ಸಮಾವೇಶ ಮಾಡಿ, ಬಿಜೆಪಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದೆ. ಯೋಜನೆ ನಿಟ್ಟಿನಲ್ಲಿ ಕೇಂದ್ರದಿಂದ ಅಧಿಸೂಚನೆ ಹೊರಡಿಸಲು ಬಿಜೆಪಿಯಿಂದ ಸಾಧ್ಯವಾಗಿಲ್ಲ ಎಂದಿದೆ. ಎರಡು ಪಕ್ಷಗಳು ಅನ್ಯಾಯ ಮಾಡಿವೆ ತಾನು ಅಧಿಕಾರಕ್ಕೆ ಬಂದರೆ ಯೋಜನೆ ಪೂರ್ಣಗೊಳಿಸುವುದಾಗಿ ಜೆಡಿಎಸ್‌ ಭರವಸೆ ನೀಡುತ್ತಿದೆ. ಕಾಂಗ್ರೆಸ್‌ಅಧಿಕಾರದಲ್ಲಿದ್ದಾಗ ಯುಕೆಪಿ ಕುರಿತು ಹೋರಾಟ ನಡೆಸಿದ್ದ ಬಿಜೆಪಿ, ಇದೀಗ ಅಧಿಕಾರದಲ್ಲಿದ್ದು, ಯೋಜನೆ ಜಾರಿಗೆ ಪ್ರಾಮಾಣಿಕ ಯತ್ನ ತೋರಿದ್ದು ಅದಕ್ಕೆ ತಾವು ಬದ್ಧ ಎಂದು ನಂಬಿಸುವ ಯತ್ನಕ್ಕೆ ಮುಂದಾಗಿದೆ. ಚುನಾವಣೆ ಪ್ರಚಾರ ವೇಳೆ ಯುಕೆಪಿ-3 ಕುರಿತ ಆರೋಪ-ಪ್ರತ್ಯಾರೋಪ ಅಬ್ಬರ ಜೋರಾಗುವುದಂತು ದಿಟ.

-ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next