ವಿಧಾನ ಪರಿಷತ್ತು: ಗುಂಡಿನ ಮೇಲೆ ನಡೆದ ಸ್ವಾರಸ್ಯಕರ ಚರ್ಚೆಯು ಸಮ್ಮಿಶ್ರ ಸರ್ಕಾರದ ಪತನದ ದಿನಗಳನ್ನು ಮೆಲುಕುಹಾಕುವುದರ ಜತೆಗೆ ಅದರ ಗುಟ್ಟು ಬಿಚ್ಚಿಟ್ಟ ಪ್ರಸಂಗ ಬುಧವಾರ ಮೇಲ್ಮನೆಯಲ್ಲಿ ನಡೆಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತಿಗಿಳಿದ ಬಿಜೆಪಿಯ ಎಚ್.ವಿಶ್ವನಾಥ್, “ಈಗೆಲ್ಲಾ ಏಳುವುದರಿಂದ ಹಿಡಿದು ಮಲುಗುವವರೆಗೂ ತೆರಿಗೆ ಹೊರೆ. ಬೆಳಗ್ಗೆ ಎದ್ದು ಆಕಳಿಸಿದರೂ ಜಿಎಸ್‌ಟಿ ಅಂತಾರೆ, ಮಲಗುವಾಗ ಹಾಕಿಕೊಳ್ಳುವ ಎಲೆ-ಅಡಿಕೆಗೂ ಜಿಎಸ್‌ಟಿ ಅಂತಾರೆ’ ಎಂದು ಟೀಕಿಸಿದರು.
ಆಗ ತಕ್ಷಣ ಬಿಜೆಪಿಯ ಭಾರತಿ ಶೆಟ್ಟಿ, “ಮಲಗುವ ಮುನ್ನ ಹಾಕುವ ಗುಂಡು (ಮದ್ಯ) ಮರೆತುಬಿಟ್ಟಿರಿ’ ಎಂದು ಕಾಲೆಳೆದರು. ಇದಕ್ಕೆ ನಗುತ್ತಲೇ ಉತ್ತರಿಸಿದ ವಿಶ್ವನಾಥ್, “ಸಮ್ಮಿಶ್ರ ಸರ್ಕಾರದ ಪತನದ ಸಂದರ್ಭದಲ್ಲಿ ಇದೇ ನಾರಾಯಣಸ್ವಾಮಿ ಮನೆಯಲ್ಲಿ ಸೇರಿ ಅದನ್ನು (ಗುಂಡು) ತೆಗೆದುಕೊಳ್ಳುತ್ತಿದ್ದೆವು. ಆ ವೇಳೆ ಸ್ವಾರಸ್ಯಕರ ಚರ್ಚೆಗಳೂ ನಡೆಯುತ್ತಿದ್ದವು’ ಎಂದು ಮೆಲುಕು ಹಾಕಿದರು.
ಆಗ ಎನ್. ರವಿಕುಮಾರ್, “ಅದೇ ಗುಂಡಿಗೆ ಈಗ ವಿಧಿಸಿರುವ ತೆರಿಗೆ ಮೇಲೆ ತುಸು ಬೆಳಕು ಚೆಲ್ಲಬೇಕು’ ಎಂದು ಕೋರಿದರು. ಪ್ರತಿಕ್ರಿಯಿಸಿದ ತೇಜಸ್ವಿನಿಗೌಡ, “ಗುಂಡಿನ ಮೇಲೆ ಬೆಳಕು ಚೆಲ್ಲಲು ಆಗುವುದಿಲ್ಲ. ಯಾಕೆಂದರೆ, ಅದು ನಡೆಯುವುದೇ ಮಬ್ಬುಗತ್ತಲಲ್ಲಿ ಹೊರತು, ಬೆಳಕಿನಲ್ಲಿ ಅಲ್ಲ’ ಎಂದು ಚಟಾಕಿ ಹಾರಿಸಿದರು.
ದನಿಗೂಡಿಸಿದ ಭಾರತಿ ಶೆಟ್ಟಿ, “ಗುಂಡು ಹೊಡೆಯುವವರಿಗೆ ಸಮಸ್ಯೆ ಆಗದು. ಅವರೊಂದಿಗೆ ಬಾಳ್ವೆ ಮಾಡುವವರಿಗೇ ಸಮಸ್ಯೆ. ಈಗ ನಮ್ಮ ಮನೆಗಳಲ್ಲಿ ಗುಂಡು ಹೊಡೆಯುವವರೆಲ್ಲಾ ಸರ್ಕಾರದ ಗ್ಯಾರಂಟಿಗಳ ಜಾರಿಗೆ ಮೂಲಕ ಕಾರಣ ತಾವೇ (ಮದ್ಯಪಾನಿಗಳು) ಎಂದು ಬೀಗುತ್ತಿದ್ದಾರೆ’ ಎಂದು ಗಮನಸೆಳೆದರು.
ಈ ವೇಳೆ ವಿಶ್ವನಾಥ್, “ಗುಂಡು ಹಾಕದ ನಿಮಗೇ ಇಷ್ಟು ಗುಂಡಿಗೆ ಇರಬೇಕಾದರೆ, ಗುಂಡು ಹಾಕುವ ನಮಗೆ ಎಷ್ಟು ಗುಂಡಿಗೆ ಇರಬೇಕು?’ ಎಂದು ಕೇಳಿದರು.
ಆಗ ಸದನದಲ್ಲಿ ನಗೆಯ ಬುಗ್ಗೆ ಚಿಮ್ಮಿತು. ಸಭಾ ನಾಯಕ ಭೋಸರಾಜು, “ಗುಂಡು ಆರೋಗ್ಯಕ್ಕೆ ಹಾನಿಕಾರಕ. ಅದನ್ನು ಹೆಚ್ಚು ತೆಗೆದುಕೊಳ್ಳಬಾರದು ಅಂತಾನೇ ಮುಖ್ಯಮಂತ್ರಿಗಳು ತೆರಿಗೆ ಜಾಸ್ತಿ ಮಾಡಿದ್ದಾರೆ’ ಎಂದು ಸಮರ್ಥನೆ ನೀಡಿದರು. ”
ಅದೇನೇ ಇರಲಿ, ಸಾಮಾನ್ಯರ ಮನಸ್ಸನ್ನು ಮುದ ಮಾಡುವಂತಹ ಈ ಸಾರಾಯಿ ಸರ್ವರೋಗಕ್ಕೂ ಮದ್ದು’ ಎಂದು ಚರ್ಚೆಗೆ ತೆರೆ ಎಳೆದರು.