Advertisement
ಬಿಜೆಪಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಪ್ರಬಲ ಸ್ಪರ್ಧೆ ಎದುರಾಗಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳುವ ಸವಾಲು ಉಂಟಾಗಿದೆ. ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೂ ವಿಧಾನ ಪರಿಷತ್ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ. ಕಾಂಗ್ರೆಸ್ ವರ್ಷದ ಹಿಂದೆಯೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಚಾರ ಆರಂಭಿಸಿತ್ತು. ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಪರಾಜಿತರಾಗಿದ್ದ ಕುಶಾಲನಗರದ ಕೆ.ಕೆ. ಮಂಜುನಾಥ್ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ತೀವ್ರ ಪ್ರಚಾರದಲ್ಲಿ ನಿರತವಾಗಿದೆ.
ಸುಪ್ರೀಂಕೋರ್ಟ್‌ನ ಆದೇಶದಂತೆ ಚುನಾವಣಾ ಆಯೋಗ ಕಳೆದ ಬಾರಿಯ ಮತದಾರರ ಪಟ್ಟಿಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಬಾರಿ ಹೊಸದಾಗಿ ಮತದಾರರ ಪಟ್ಟಿ ಸಿದ್ಧಪಡಿಸಲಾಗಿದೆ. ನೈಋತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳು ದ.ಕ., ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕ ಮಗಳೂರು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹೊನ್ನಾಳಿ ತಾಲೂಕುಗಳು ಒಳಗೊಂಡಿದ್ದು, ಒಟ್ಟು 30 ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರುತ್ತವೆ. 1988ರಲ್ಲಿ ನೈಋತ್ಯ ಪದವೀಧರರ ಕ್ಷೇತ್ರ ರಚನೆಯಾದಾಗ ಇಲ್ಲಿ 7,000 ಮತದಾರರಿದ್ದು 2018ರಲ್ಲಿ 67,185ಕ್ಕೆ ಏರಿಕೆಯಾಗಿದೆ. 27,044 ಮತದಾರರನ್ನು ಹೊಂದಿರುವ ಶಿವಮೊಗ್ಗ ಪ್ರಥಮ ಸ್ಥಾನದಲ್ಲಿದೆ. ಶಿಕ್ಷಕರ ಕ್ಷೇತ್ರದಲ್ಲಿ 20,481 ಮತದಾರರಿದ್ದು, 7,140 ಮತದಾರರನ್ನು ಹೊಂದಿರುವ ದಕ್ಷಿಣ ಕನ್ನಡ ಪ್ರಥಮ ಸ್ಥಾನದಲ್ಲಿದೆ.
Related Articles
ನೈಋತ್ಯ ಶಿಕ್ಷಕರ ಕ್ಷೇತ್ರ: ಕ್ಯಾ| ಗಣೇಶ್ ಕಾರ್ಣಿಕ್ ( ಬಿಜೆಪಿ), ಎಸ್.ಎಲ್. ಭೋಜೆಗೌಡ ( ಜೆಡಿಎಸ್), ಕೆ.ಕೆ. ಮಂಜುನಾಥ್ ಕುಮಾರ್ (ಕಾಂಗ್ರೆಸ್), ಡಾ| ಅರುಣ್ ಹೊಸಕೊಪ್ಪ, ಅಲೋಶಿಯಸ್ ಡಿ’ಸೋಜಾ, ಕೆ.ಬಿ. ಚಂದ್ರೋಜಿ ರಾವ್, ಡಿ.ಕೆ. ತುಳಸಪ್ಪ, ಅಂಪಾರು ನಿತ್ಯಾನಂದ ಶೆಟ್ಟಿ, ಪ್ರಭುಲಿಂಗ ಬಿ.ಆರ್., ಬಸವರಾಜಪ್ಪ ಕೆ.ಸಿ., ಎಂ. ರಮೇಶ್, ರಾಜೇಂದ್ರ ಕುಮಾರ್ ಕೆ.ಪಿ. (ಪಕ್ಷೇತರರು).
Advertisement
ನೈಋತ್ಯ ಪದವೀಧರರ ಕ್ಷೇತ್ರ: ಆಯನೂರು ಮಂಜುನಾಥ್ (ಬಿಜೆಪಿ), ಎಸ್.ಪಿ. ದಿನೇಶ್ (ಕಾಂಗ್ರೆಸ್), ಅರುಣ್ ಕುಮಾರ್ (ಜೆಡಿಎಸ್), ಜಿ.ಸಿ. ಪಟೇಲ್ (ಸರ್ವ ಜನತಾ ಪಕ್ಷ), ಜಫಾರುಲ್ಲಾ ಸತ್ತರ್ ಖಾನ್, ಜೆ.ಎಂ. ಜಯ ಕುಮಾರ್, ಪ್ರಭುಲಿಂಗ ಬಿ.ಆರ್., ಬಿ.ಕೆ. ಮಂಜುನಾಥ (ಪಕ್ಷೇತರರು).
ಪರಿಷತ್ ನಲ್ಲಿ ಅವಿಭಜಿತ ದ.ಕ.ದ 6 ಸದಸ್ಯರುಮಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹರೀಶ್ ಕುಮಾರ್ ಹಾಗೂ ಬಿ.ಎಂ. ಫಾರೂಕ್ ಅವರು ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಪರಿಷತ್ ನಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಸದಸ್ಯ ಬಲ ಆರಕ್ಕೇರಿದೆ.
ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಒಟ್ಟು 11 ಸ್ಥಾನಗಳಿಗೆ ಜೂ. 11ರಂದು ಚುನಾವಣೆ ನಿಗದಿಯಾಗಿತ್ತು. ಸದಸ್ಯ ಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ 4, ಬಿಜೆಪಿಗೆ 5 ಹಾಗೂ ಜೆಡಿಎಸ್‌ಗೆ 2 ಸ್ಥಾನಗಳನ್ನು ಗೆಲ್ಲುವ ಅವಕಾಶವಿತ್ತು. 11 ಸ್ಥಾನಗಳಿಗೆ ಮೂರು ಪಕ್ಷಗಳಿಂದ ಒಟ್ಟು 11 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು, ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದೆ. ಹರೀಶ್ ಕುಮಾರ್ ಕಾಂಗ್ರೆಸ್‌ನಿಂದ ಹಾಗೂ ಬಿ.ಎಂ. ಫಾರೂಕ್ ಜೆಡಿಎಸ್ ನಿಂದ ಆಯ್ಕೆಯಾಗಿದ್ದಾರೆ. ಪ್ರಸ್ತುತ ಹರೀಶ್ ಕುಮಾರ್ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಬಿ.ಎಂ. ಫಾರೂಕ್ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದ.ಕ.ದಿಂದ ಬಿಜೆಪಿಯ ಕ್ಯಾ| ಗಣೇಶ್ ಕಾರ್ಣಿಕ್, ಕಾಂಗ್ರೆಸ್‌ನಿಂದ ಐವನ್ ಡಿ’ಸೋಜಾ, ಉಡುಪಿ ಜಿಲ್ಲೆಯಿಂದ ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಕ್ಯಾ| ಕಾರ್ಣಿಕ್ ಸದಸ್ಯತ್ವ ಅವಧಿ ಜೂ. 8ಕ್ಕೆ ಮುಕ್ತಾಯವಾಗಲಿದ್ದು, ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಮರಳಿ ಸ್ಪರ್ಧಿಸುತ್ತಿದ್ದಾರೆ. ವಿಧಾನಪರಿಷತ್‌ನಲ್ಲಿ ಪ್ರತಾಪಚಂದ್ರ ಶೆಟ್ಟಿ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳೀಯಾಡಳಿತ ಸಂಸ್ಥೆಗಳಿಂದ, ಕ್ಯಾ| ಗಣೇಶ್ ಕಾರ್ಣಿಕ್ ಅವರು ನೈಋತ್ಯ ಶಿಕ್ಷಕರ ಕ್ಷೇತ್ರ, ಹರೀಶ್ ಕುಮಾರ್ ಹಾಗೂ ಬಿ.ಎಂ. ಫಾರೂಕ್ ಅವರು ವಿಧಾನಸಭೆಯಿಂದ ಪ್ರತಿನಿಧಿಸುತ್ತಿದ್ದಾರೆ. ಐವನ್ ಡಿ’ಸೋಜಾ ಸರಕಾರದಿಂದ ನಾಮಕರಣಗೊಂಡ ಸದಸ್ಯರು. ಐವನ್ ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಹಾಗೂ ಕ್ಯಾ| ಕಾರ್ಣಿಕ್ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದ್ದರು. ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವರಾಗಿದ್ದರು. ಡಿಸಿಸಿ ಕಚೇರಿಗೆ ಹರೀಶ್ ಕುಮಾರ್ ಭೇಟಿ
ಆಯ್ಕೆಯಾದ ಬಳಿಕ ಹರೀಶ್ ಕುಮಾರ್ ಅವರು ಜೂ. 5ರಂದು ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದು, ಬಳಿಕ 3 ಗಂಟೆಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವರು. — ಕೇಶವ ಕುಂದರ್