ಮಧ್ಯ ಕರ್ನಾಟಕದ ಬಯಲುಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷಿಯ ಭದ್ರಾ ಮೇಲ್ದಂಡೆಗೆ ಕೊನೆಗೂ ರಾಷ್ಟ್ರೀಯ ಯೋಜನೆ ಮಾನ್ಯತೆ ಸಿಕ್ಕಿದೆ. ಈ ಮೂಲಕ ರಾಷ್ಟ್ರೀಯ ಯೋಜನೆ ಎಂಬ ಮನ್ನಣೆ ಪಡೆದ ಹಾಗೂ ಕಾಮಗಾರಿಗೆ ಶೇ.60ರಷ್ಟು ಅನುದಾನ ಪಡೆದು ಕೊಳ್ಳುತ್ತಿರುವ ರಾಜ್ಯದ ಪ್ರಪ್ರಥಮ ಯೋಜನೆಯಾಗಿದೆ. ಯೋಜನೆಗೆ ಇನ್ನೇನು ರಾಷ್ಟ್ರೀಯ ಮಾನ್ಯತೆ ಸಿಕ್ಕಿತು ಎನ್ನುವಾಗ ಆಂಧ್ರಪ್ರದೇಶ ಇದಕ್ಕೆ ತಕರಾರು ವ್ಯಕ್ತಪಡಿಸಿತ್ತು. ಆದರೆ ರಾಜ್ಯ ಸರಕಾರ, ಕೇಂದ್ರ ಜಲ ಆಯೋಗದಲ್ಲಿ ಸಮರ್ಥ ಉತ್ತರ ನೀಡಿದ್ದರಿಂದ ಆಂಧ್ರದ ತಕರಾರು ನಗಣ್ಯವಾಯಿತು. 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹತ್ತು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದರಿಂದ ಯೋಜನ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಸದ್ಯ ರಾಷ್ಟ್ರೀಯ ಮಾನ್ಯತೆ ದೊರೆತಿರುವುದರಿಂದ ಯೋಜನೆಗೆ ವೇಗ ಸಿಗಲಿದೆ. ಇದರ ಜತೆಯಲ್ಲಿ ಈವರೆಗೆ ಆಗಿರುವ ವೆಚ್ಚ ಹೊರತುಪಡಿಸಿ ಇನ್ನು ಮುಂದೆ ನಡೆಯುವ ಕಾಮಗಾರಿಯ ಶೇ.60ರಷ್ಟು ಅನುದಾನ ನೇರವಾಗಿ ಕೇಂದ್ರ ದಿಂದಲೇ ಬರಲಿದೆ. ಯೋಜನೆಗೆ ಕೇಂದ್ರ ಸರಕಾರದಿಂದ 12,500 ಕೋಟಿ ರೂ. ಅನುದಾನ ದೊರೆಯಲಿದೆ ಎಂದು ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಆಶಾಭಾವನೆ ಹೊಂದಿದ್ದಾರೆ.
ಸ್ವಾತಂತ್ರ್ಯ ದೊರೆತು 75 ವರ್ಷಗಳ ಅನಂತರ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯಲಿದೆ. ಅಲ್ಲದೆ ಪಕ್ಕದ ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಿಗೂ ಯೋಜನೆಯಿಂದ ಹೆಚ್ಚು ಅನುಕೂಲವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆ 4 ಜಿಲ್ಲೆಗಳ 12 ತಾಲೂಕುಗಳ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ. 367 ಕೆರೆಗಳಿಗೆ ಪ್ರತೀ ವರ್ಷ ಅರ್ಧದಷ್ಟು ನೀರು ತುಂಬಿಸಲು 6 ಟಿಎಂಸಿ, ಚಿತ್ರದುರ್ಗ ಜಿಲ್ಲೆಯಲ್ಲಿರುವ ವಾಣಿವಿಲಾಸ ಸಾಗರಕ್ಕೆ 2 ಟಿಎಂಸಿ ನೀರು ಮೀಸಲಿಡಲಾಗಿದೆ. ಕೃಷ್ಣಾ ಕೊಳ್ಳ ವ್ಯಾಪ್ತಿಗೆ ಸೇರುವ ಈ ಯೋಜನೆಯಡಿ ತುಂಗಾ ನದಿಯಿಂದ 17.4 ಟಿಎಂಸಿ ಅಡಿ ನೀರು ಸೇರಿಕೊಂಡಂತೆ ಭದ್ರಾ ಜಲಾಶಯದಿಂದ 29.9 ಟಿಎಂಸಿ ಅಡಿ ನೀರನ್ನು ನಾಲ್ಕು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಯೋಜನೆ ಹಲವು ಬಾರಿ ಪರಿಷ್ಕರಣೆಯಾಗಿದ್ದು, 2020, ಡಿ.16ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಯೋಜನಾ ವೆಚ್ಚ 21,473.67 ಕೋಟಿ ರೂ.ಗಳಾಗಿದೆ.
ಇತ್ತೀಚೆಗೆ ಭದ್ರಾ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಾಮಗಾರಿ ಆರಂಭವಾಗಿ ಹತ್ತು ವರ್ಷ ಕಳೆದರೂ ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ. ತ್ವರಿತಗತಿಯಲ್ಲಿ ಮುಗಿಯಬೇಕು. ಗುತ್ತಿಗೆದಾರರಿಗೆ ನೀಡಿರುವ ಅವ ಧಿ ಮೀರಿದ್ದರೆ ದಂಡ ವಿ ಧಿಸಿ ಎಂದು ತಾಕೀತು ಮಾಡಿದ್ದರು. ಕುಂಟು ನೆಪಗಳನ್ನು ಬಿಟ್ಟು ಕಾಮಗಾರಿಗೆ ವೇಗ ನೀಡಿದರೆ ಬರದ ನಾಡಿಗೆ ಭಾಗೀರಥಿ ಹರಿಯಲಿದ್ದಾಳೆ.
ಸತತ ಬರದ ಹೊಡೆತಕ್ಕೆ ಸಿಲುಕಿ ನಲುಗಿ ಹೋಗಿದ್ದ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕು ಎನ್ನುವುದು ಈ ಭಾಗದ ಜನರ ದಶಕಗಳ ಬೇಡಿಕೆ. ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಆಸೆ ಕೂಡ ಇದಾಗಿತ್ತು. ಇದರ ಜತೆ ವಾಣಿವಿಲಾಸ ಸಾಗರಕ್ಕೆ ಮೀಸಲಿಟ್ಟಿರುವ 2 ಟಿಎಂಸಿ ನೀರನ್ನು 5 ಟಿಎಂಸಿಗೆ ಹೆಚ್ಚಿಸಬೇಕು ಎನ್ನುವುದು ಜಿಲ್ಲೆಯ ಜನರ ಪ್ರಮುಖ ಬೇಡಿಕೆಯಾಗಿದೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿರುವಂತೆ ವಿವಿ ಸಾಗರ ಭರ್ತಿಯಾದರೆ ಮಧ್ಯ ಕರ್ನಾಟಕದ ಪ್ರತೀ ಹಳ್ಳಿಗೂ ಕುಡಿಯುವ ನೀರು ಒದಗಿಸಲು ಸಾಧ್ಯ. ಬರದ ಛಾಯೆ ದೂರವಾಗಿ ಹಸುರು ನಳನಳಿಸಲಿದೆ.