ಬೆಂಗಳೂರು: ನಗರದ ಸಂಚಾರ ನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಸಾಮಾನ್ಯ ಬಸ್‌ಗಳಲ್ಲಿ ಯುಪಿಐ ಟಿಕೆಟ್ ವ್ಯವಸ್ಥೆ ಸಮರ್ಪಕವಾಗಿ ಅನುಷ್ಠಾನವಾಗದ ಕಾರಣ, ನಿತ್ಯ ಪ್ರಯಾಣಿಕರಿಗೆ ಚಿಲ್ಲರೆ ಒದಗಿಸುವುದು ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಜಗಳ-ಮುಕ್ತ, ಕಾಗದ ರಹಿತವಾಗಿಸುವ ನಿಟ್ಟಿ ನಲ್ಲಿ ಬಿಎಂಟಿಸಿ ಡಿಜಿಟಲ್ ಟಿಕೆಟ್ ತಂತ್ರಜ್ಞಾನ ವ್ಯವಸ್ಥೆ ಪರಿಚಯಿಸಿದೆ. ಇದರ ಭಾಗವಾಗಿ ದೈನಂದಿನ, ಸಾಪ್ತಾಹಿಕ, ಮಾಸಿಕ ಪಾಸುಗಳನ್ನೂ ನೀಡು ತ್ತಿದೆ. ಇದರ ನಡುವೆಯೂ ಕೆಲವೆಡೆ ಬಸ್ ಗಳಲ್ಲಿ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ “ಚಿಲ್ಲರೆ’ ಕಿರಿಕಿರಿ ಸಾಮಾನ್ಯ ಎಂಬಂತಾಗಿದ್ದು ಯುಪಿಐ ಬಾರ್ ಕೋಡ್ ಟಿಕೆಟ್ ವ್ಯವಸ್ಥೆ ಯನ್ನು ಬಿಎಂಟಿಸಿ ಎಲ್ಲ ಬಸ್‌ಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ನಗರದಲ್ಲಿ ಬಿಎಂಟಿಸಿ ಸಾಮಾನ್ಯ ಬಸ್‌ಗಳಿಂದ ಹಿಡಿದು ವಾಯು ವಜ್ರ, ವೋಲ್ವೋ ಸೇರಿದಂತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಉದ್ಯೋಗಸ್ಥರು, ವಿದ್ಯಾರ್ಥಿಗಳು, ನೌಕರರು, ಕೂಲಿ ಕಾರ್ಮಿಕರು ಸೇರಿದಂತೆ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿ ಸುತ್ತಾರೆ. ಪ್ರಯಾಣಿಸುವ ಎಲ್ಲರೂ ಬಸ್‌ಪಾಸ್ ಹೊಂದಿರುವುದಿಲ್ಲ. ಒಂದು ಸ್ಟೇಜ್ ನಿಂದ ಮತ್ತೂಂದು ಸ್ಟೇಜ್‌ಗೆ ಕನಿಷ್ಠ ಪ್ರಯಾಣ ದರ 5, 10 ರೂ. ಇದ್ದಾಗ ಪ್ರಯಾಣಿಕರು 200 ಅಥವಾ 500 ರೂ. ಮುಖಬೆಲೆಯ ನೋಟು ಕೊಟ್ಟಾಗ ನಿರ್ವಾಹಕರಿಗೆ ಏಕಾಏಕಿ ಚಿಲ್ಲರೆ ಒದಗಿಸುವುದು ಕಷ್ಟವಾಗಲಿದೆ. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಕೆಲವೊಮ್ಮೆ ವಾಗ್ವಾದಗಳು ನಡೆದು ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಿದ ಉದಾಹರಣೆಗಳು ಇವೆ. ಇಲಾಖೆ ಮಾಹಿತಿಯಂತೆ ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಒಟ್ಟು 6,531 ಬಿಎಂಟಿಸಿ ಬಸ್‌ಗಳು ನಿತ್ಯ ಸಂಚರಿಸುತ್ತವೆ. ಈ ಪೈಕಿ 5,250 ಬಸ್‌ಗಳಲ್ಲಿ ಯುಪಿಐ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆ ಅಳವಡಿಸಲಾಗಿದ್ದರೂ ವಾಯು ವಜ್ರ, ವೋಲ್ವೋ ಬಸ್ ಹೊರತುಪಡಿಸಿ ಬಹುತೇಕ ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಈ ವ್ಯವಸ್ಥೆ ಈವರೆಗೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹಲವು ಬಸ್‌ಗಳಲ್ಲಿ ಯುಪಿಐ ಕ್ಯೂಆರ್ ಕೋಡ್ ಫಲಕವನ್ನೇ ಅಂಟಿಸಿಲ್ಲ. ಯುಪಿಐ ಗೂಗಲ್ ಪೇ, ಪೋನ್ ಪೇ, ಆನ್‌ಲೈನ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆದುಕೊಳ್ಳಬೇಕು ಎನ್ನುವ ಪ್ರಯಾಣಿ ಕರಿಗೆ ಇದು ನಿರಾಸೆ ತಂದಿದೆ.
ಕೆನರಾ ಬ್ಯಾಂಕ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬಿಎಂಟಿಸಿಗೆ ಈವರೆಗೂ ಯುಪಿಐ ವಹಿವಾಟಿನಲ್ಲಿ ಕಳೆದ ನಾಲ್ಕು ವರ್ಷದಿಂದ ಗರಿಷ್ಠ ಒಟ್ಟು 129 ಕೋಟಿ ರೂ. ಸಂಗ್ರಹವಾಗಿದೆ. ಕೋವಿಡ್ ಸಂದರ್ಭದಲ್ಲಿ ಯುಪಿಐ ಮೂಲಕ ಹಣ ಪಡೆದು ಟಿಕೆಟ್ ನೀಡುವ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು. ಇದಕ್ಕೆ ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿತ್ತು. ಆದರೆ, ಇದೀಗ ಕೆಲ ಐಶಾರಾಮಿ ಬಸ್ ಹೊರತುಪಡಿಸಿ ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಈ ನಿಯಮ ಜಾರಿಯಾಗಿಲ್ಲ. ಹಾಗಾಗಿ ಇದನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಬೇಕಿದೆ.
ನಿತ್ಯ ಸಾವಿರಾರು ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸುತ್ತವೆ. ಬಹುತೇಕ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ತುಂಬಿರುತ್ತದೆ. ಇಂತಹ ಸಮಯದಲ್ಲಿ ಯುಪಿಐ ಮೂಲಕ ಹಣ ಪಡೆದು ಟಿಕೆಟ್ ನೀಡುವುದು ಕಷ್ಟದಾಯಕ. ಕೆಲವೊಮ್ಮೆ ಪ್ರಯಾಣಿಕರು ಮೊಬೈಲ್‌ನಲ್ಲಿ ನೆಟ್ ವರ್ಕ್ ಸಮಸ್ಯೆ, ತಾಂತ್ರಿಕ ಅಡಚಣೆ ಕಾರಣ ನೀಡಿ ಆನ್‌ಲೈನ್ ಪಾವತಿ ವಿಳಂಬವಾಗಿ ಸಮಸ್ಯೆ ಎದುರಾಗಬಹುದು ಎಂದು ಬಿಎಂಟಿಸಿ ನಿರ್ವಾಹಕರೊಬ್ಬರು ತಿಳಿಸಿದರು.
ಯುಪಿಐ ವಹಿವಾಟಿನಲ್ಲಿ ಹಣ ಸಂಗ್ರಹ ಹೆಚ್ಚಳ: ಕೋವಿಡ್ ಬಳಿಕ ಪ್ರತಿ ವರ್ಷ ಬಿಎಂಟಿಸಿ ಬಸ್ ಗಳ ಯುಪಿಐ ಕ್ಯೂ ಆರ್ ಕೋಡ್ ವಾಹಿವಾಟಿನಲ್ಲಿ ಮೊತ್ತ ಸಂಗ್ರಹ ಹೆಚ್ಚಾಗಿದೆ. 2022ರ ಜನವರಿಯಿಂದ ಡಿಸೆಂಬರ್ ಅಂತ್ಯದ ವರೆಗೆ ಎಲ್ಲ ಮಾದರಿ ಬಸ್‌ಗಳಲ್ಲಿ 10,99,773 ರೂ. ಯುಪಿಐ ವಹಿವಾಟು ನಡೆದಿದ್ದು, 11.45 ಕೋಟಿ ರೂ. ಸಂಗ್ರಹವಾಗಿದೆ. ಇನ್ನು 2023ರ ಲ್ಲಿ 49,04,219 ವಹಿವಾಟಿನಲ್ಲಿ 48.25 ಕೋಟಿ ರೂ., 2024ರ ಜನವರಿಯಿಂದ ಜುಲೈವರೆಗೆ ಒಟ್ಟು 82,17,018 ರೂ. ವಹಿವಾಟು ನಡೆದು 50.69 ಕೋಟಿ ರೂ. ಸಂಗ್ರಹವಾಗಿದೆ.
ಯುಪಿಐ ಟಿಕೆಟ್ನ ಪರಿಣಾಮ ಏನು?:
ಅನುಕೂಲ :
- ಯುಪಿಐ ಟಿಕೆಟ್ ವ್ಯವಸ್ಥೆಯಿಂದ ನಗದು ರಹಿತ ಪಾವತಿ
- ಚಿಲ್ಲರೆ ಸಮಸ್ಯೆಗೆ ಮುಕ್ತಿ
- ಸಮಯ ಉಳಿತಾಯ
- ಪ್ರಯಾಣಿಕರು, ನಿರ್ವಾಹಕರ ನಡುವೆ ಕಿರಿಕಿರಿಗೆ ವಿರಾಮ
ಅನಾನುಕೂಲ:
- ಮೊಬೈಲ್ ನೆಟ್‌ವರ್ಕ್ ಸಿಗದಿರುವುದು
- ಕೆಲ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ಹತ್ತಿದಾಗ ನಿರ್ವಾಹಕರಿಗೆ ಹೆಚ್ಚಿನ ಸಮಸ್ಯೆ ಎಂಬ ಕಾರಣ
- ಯುಪಿಐ ಟಿಕೆಟ್ ಪಾವತಿಗೆ ಕೆಲವು ನಿರ್ವಾಹಕರಲ್ಲಿ ನಿರಾಸಕ್ತಿ
- ಕೆಲವೊಮ್ಮೆ ಯುಪಿಐ ಹಣ ಪಾವತಿ ವಿಳಂಬ ದಿಂದ ಅನಗತ್ಯವಾಗಿ ಸಮಯ ನಷ್ಟ
- ಪ್ರತ್ಯೇಕವಾಗಿ ಯುಪಿಐ ಪಾವತಿ ದಾಖಲೆ ಕೂಡಿ ಡಬೇಕು ಎಂಬ ಭಾವನೆ
- ಬ್ಯಾಂಕುಗಳ ತಾಂತ್ರಿಕ ಕಾರಣದ ನೆಪ.
ಬಿಎಂಟಿಸಿ ಸಾಮಾನ್ಯ ಬಸ್‌ಗಳಿಂದ ಎಲ್ಲ ಮಾದರಿ ಬಸ್‌ಗಳಲ್ಲಿ ನಿರ್ವಾ ಹಕರು ಯುಪಿಐ ಬಾರ್ ಕೋಡ್ ಮೂಲಕ ಹಣ ಸ್ವೀಕರಿಸುವುದನ್ನು ಕಡ್ಡಾ ಯಗೊಳಿಸಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳು ಕಂಡು ಬಂದಿಲ್ಲ. ಯುಪಿಐ ಮೂಲಕ ಹಣ ಪಡೆಯದಿರುವ ಬಗ್ಗೆ ದೂರುಗಳು ಬಂದಲ್ಲಿ ಕ್ರಮವಹಿಸಲಾಗು ವುದು. ಬಿಎಂಟಿಸಿ ಎಲ್ಲ ಬಸ್‌ಗಳಲ್ಲಿ ಯುಪಿಐ ಬಾರ್ ಕೋಡ್ ಅಂಟಿಸಿರುವ ಕುರಿತು ಪರಿಶೀಲಿಸಿ ಸೂಚನೆ ನೀಡಲಾಗುವುದು.
–ಎಂ.ಶಿಲ್ಪಾ, ಬಿಎಂಟಿಸಿ ಸಂಸ್ಥೆ ನಿರ್ದೇಶಕರು (ಮಾಹಿತಿ ಮತ್ತು ತಂತ್ರಜ್ಞಾನ).
ಯುಪಿಐ ಆಧರಿತ ಟಿಕೆಟ್ ವಿತರಣೆ ಸಮರ್ಪಕವಾಗಿ ಜಾರಿಯಾದರೆ ಜೇಬಿನಲ್ಲಿ ಚಿಲ್ಲರೆ ಇಲ್ಲದಿದ್ದರೂ, ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು. ಬ್ಯಾಂಕ್ ಖಾತೆಯಲ್ಲಿ ಹಣ, ಗೂಗಲ್ ಪೇ, ಪೋನ್ ಪೇ ಯುಪಿಐ ತಂತ್ರಜ್ಞಾನ ಇದ್ದರೆ ಸಾಕು. ಕ್ಯೂಆರ್ ಕೋಡ್ ಬಳಸಿ ಬಸ್ ನಿರ್ವಾಹಕರಿಗೆ ಟಿಕೆಟ್ ಹಣ ಪಾವತಿಸಬಹುದು. ಆಗ ಪ್ರಯಾಣಿಕರು ಹಾಗೂ ನಿರ್ವಾಹಕ ನಡುವೆ ಚಿಲ್ಲರೆ ಸಮಸ್ಯೆಯೇ ಉದ್ಭವಿಸುವುದಿಲ್ಲ. -ವೀರೇಶ್, ಪ್ರಯಾಣಿಕ.
-ರಘು ಕೆ.ಜಿ