Advertisement

UPI ಲೈಟ್‌ ಪಾವತಿ ಈಗ ಮತ್ತಷ್ಟು ಗ್ರಾಹಕಸ್ನೇಹಿ…3 ಮಹತ್ತರ ಬದಲಾವಣೆ

10:13 AM Aug 17, 2023 | Team Udayavani |

3 ಮಹತ್ತರ ಬದಲಾವಣೆಗಳನ್ನು ಘೋಷಿಸಿದ ಆರ್‌ಬಿಐ
ಡಿಜಿಟಲ್‌ ಕರೆನ್ಸಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಕ್ಕಂತೆ ತಾಂತ್ರಿಕತೆ ಮತ್ತು ನಿಯಮಗಳೂ ಗ್ರಾಹಕ ಸ್ನೇಹಿಯಾಗುತ್ತಿವೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಅಧ್ಯಕ್ಷ ಶಕ್ತಿಕಾಂತ್‌ ದಾಸ್‌ ಅವರು ಯುಪಿಐಗೆ ಮತ್ತಷ್ಟು ಶಕ್ತಿ ತುಂಬುವ ಯೋಜನೆಗಳನ್ನು ಕಳೆದ ವಾರ ನಡೆದ ದ್ವೆ„ಮಾಸಿಕ ವಿತ್ತೀಯ ನೀತಿ ಪರಿಶೀಲನ ಸಭೆಯ ಬಳಿಕ ಪ್ರಕಟಿಸಿದ್ದಾರೆ. ಈ ಪೈಕಿ ಮೂರು ಪ್ರಮುಖ ಬದಲಾವಣೆಗಳು ಸೇರಿವೆ.

Advertisement

ಮಿತಿ ಹೆಚ್ಚಳ
ಜನರ ಬಹುಕಾಲದ ಬೇಡಿಕೆಗೆ ಸ್ಪಂದಿಸಿರುವ ಆರ್‌ಬಿಐ, ಯುಪಿಐ ಲೈಟ್‌ ಮೂಲಕ ಪಾವತಿಸುವ ಮೊತ್ತವನ್ನು ಹೆಚ್ಚಿಸಿದೆ. ಇದುವರೆಗೆ ಒಮ್ಮೆ 200 ರೂ.ಗಳ ವರೆಗಿನ ಮೊತ್ತವನ್ನು ಮಾತ್ರ ಪಾವತಿಸಲು ಸಾಧ್ಯವಾಗಿತ್ತು. ಆದರೆ ಈಗ ಅದನ್ನು ಹೆಚ್ಚಿಸಲಾಗಿದ್ದು, ಇನ್ನು ಮುಂದೆ 500 ರೂ.ವರೆಗಿನ ಮೊತ್ತವನ್ನು ಯುಪಿಐ ಲೈಟ್‌ ಮೂಲಕ ಪಾವತಿಸಬಹುದು. ಆದರೆ ಒಂದು ದಿನಕ್ಕೆ ಗರಿಷ್ಠ ಎಂದರೆ 2,000 ರೂ.ಗಳ ವರೆಗಿನ ವ್ಯವಹಾರ ಮಿತಿಯನ್ನು ಮಾತ್ರ ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಮಾತನಾಡಿ, ಹಣ ನೀಡಿ
ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (ಎಐ) ಇತ್ತೀಚೆಗೆ ಎಲ್ಲ ಕಡೆಯೂ ಭಾರೀ ಸದ್ದು ಮಾಡಿದೆ. ಆರ್‌ಬಿಐ ಕೂಡ ಇದನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಯುಪಿಐ ಲೈಟ್‌ನಲ್ಲಿ ಇದನ್ನು ಶೀಘ್ರವೇ ಜಾರಿಗೊಳಿಸುವುದಾಗಿ ತಿಳಿಸಿದೆ. ಈ ತಂತ್ರಜ್ಞಾನದಲ್ಲಿ ಕೇವಲ ಮಾತಿನ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಎಐ ವ್ಯಕ್ತಿ ಮಾತು ಆರಂಭಿಸಿ ನೀವು ಉತ್ತರ ನೀಡಿದರಷ್ಟೇ ಸಾಕಾಗುತ್ತದೆ. ಆರಂಭದಲ್ಲಿ ಇದು ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಲಭ್ಯವಾಗಲಿದೆ. ಅನಂತರ ಇತರ ಪ್ರಾದೇಶಿಕ ಭಾಷೆಗಳಲ್ಲಿಯೂ ಸೇವೆ ಸಿಗಲಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಇದರ ಪೂರ್ಣ ಮಾಹಿತಿಯನ್ನು ಇನ್ನಷ್ಟೇ ನೀಡಬೇಕಿದೆ.

ಇಂಟರ್‌ನೆಟ್‌ ರೇಂಜ್‌ ಇಲ್ಲದೆಯೂ ಪಾವತಿ
ಪ್ರಸ್ತುತ ಚಾಲ್ತಿಯಲ್ಲಿರುವ ಮಾದರಿಯಲ್ಲಿ ಡಿಜಿಟಲ್‌ ಕರೆನ್ಸಿ ಪಾವತಿಗೆ ಇಂಟರ್‌ನೆಟ್‌ ಅಗತ್ಯ ವಾಗಿದೆ. ಇಂಟರ್‌ನೆಟ್‌ ಇದ್ದರಷ್ಟೇ ವ್ಯವಹಾರ ನಡೆಯುತ್ತಿದೆ. ಇಲ್ಲಿ ಭಾರೀ ಮಹತ್ವದ ಬದಲಾವಣೆ ಯನ್ನು ಆರ್‌ಬಿಐ ಘೋಷಿಸಿದೆ. ಇನ್ನು ಮುಂದೆ ಇಂಟರ್‌ನೆಟ್‌ ರೇಂಜ್‌ ಇಲ್ಲದ ಮತ್ತು ಅತ್ಯಂತ ಕಡಿಮೆ ರೇಂಜ್‌ ಇರುವ ಪ್ರದೇಶದಲ್ಲಿಯೂ ನೀವು ಸುಲಲಿತವಾಗಿ ವ್ಯವಹಾರ ಮಾಡಬಹುದು. ನಿಯರ್‌ ಫೀಲ್ಡ್‌ ಕಮ್ಯೂನಿಕೇಶನ್‌ (ಎನ್‌ಎಫ್ಸಿ) ತಾಂತ್ರಿಕತೆಯನ್ನು ಯುಪಿಐ ಲೈಟ್‌ ಶೀಘ್ರವೇ ಅಳವಡಿಸಿಕೊಳ್ಳಲಿದೆ. ಈ ತಂತ್ರಾಂಶದಲ್ಲಿ ಎರಡು ಡಿವೈಸ್‌ (ಮೊಬೈಲ್‌ ಮತ್ತು ಪೇಮೆಂಟ್‌ ಟರ್ಮಿನಲ್‌-ಹಣ ನೀಡುವ ಮತ್ತು ಸ್ವೀಕರಿಸುವ ಸಾಧನ)ಗಳನ್ನು ಹತ್ತಿರ ತಂದಾಗ ಮ್ಯಾಗ್ನೆಟಿಕ್‌ ಸಂಪರ್ಕದ ಮೂಲಕ ವ್ಯವಹಾರ ಪೂರ್ಣಗೊಳ್ಳುತ್ತದೆ.

ಯುಪಿಐ ಲೈಟ್‌ ಏಕೆ ಜನಪ್ರಿಯ?
ಸಣ್ಣ ವ್ಯವಹಾರಗಳಿಗೆ ಯುಪಿಐ ಲೈಟ್‌ ಹೆಚ್ಚು ಜನಪ್ರಿಯವಾಗಿದೆ. ಇದರಲ್ಲಿ ಯುಪಿಐ ಪಿನ್‌ (ವೈಯಕ್ತಿಕ ಸಂಖ್ಯೆ) ನಮೂದಿಸುವ ಅಗತ್ಯವಿಲ್ಲ. ಮಾತ್ರವಲ್ಲದೆ ಸಣ್ಣ ಸಣ್ಣ ವ್ಯವಹಾರಗಳೆಲ್ಲ ಬ್ಯಾಂಕ್‌ನ ಸ್ಟೇಟ್‌ಮೆಂಟ್‌ನಲ್ಲಿ ದಾಖಲಾಗುವುದಿಲ್ಲ. ಆ್ಯಪ್‌ನಲ್ಲಿ ಮಾತ್ರವೇ ಅದನ್ನು ನೋಡಬಹುದು. ಇವಿಷ್ಟು ಅಲ್ಲದೆ ಆನ್‌ಲೈನ್‌ ವ್ಯವಹಾರದ ಅಪಾಯ ಗಳನ್ನು ಕಡಿಮೆ ಮಾಡುವುದಕ್ಕಾಗಿ ಇಲ್ಲಿ ದಿನಕ್ಕೆ 2,000 ರೂ.ಗಳ ಮಿತಿ ಇದೆ. ರೇಂಜ್‌ ಕಡಿಮೆ ಇದ್ದಾಗಲೂ ವ್ಯವಹಾರ ಸುಲಭವಾಗಿ ಮತ್ತು ಬೇಗನೆ ಸಾಧ್ಯವಾಗುವುದ ರಿಂದ ಇದು ಹೆಚ್ಚು ಜನಪ್ರಿಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next