ಕೊಲ್ಲೂರು: 5 ಗ್ರಾಮ ನಿವಾಸಿಗಳು ಅವಲಂಬಿಸಿರುವ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೊಲ್ಲೂರು, ಜಡ್ಕಲ್, ಮುದೂರು, ಅರೆಶಿರೂರು, ಗೋಳಿಹೊಳೆ, ಯಳಜಿತ್, ಪರಿಸರದ ಗ್ರಾಮಸ್ಥರು ಚಿಕಿತ್ಸೆಗಾಗಿ ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಬೇಕಾಗಿದೆ. ವೈದ್ಯರಿದ್ದರೂ ವಿವಿಧ ವಿಭಾಗಗಳ ಸೌಕರ್ಯ ಕೊರತೆಯಿಂದಾಗಿ ರೋಗಿಗಳ ಚಿಕಿತ್ಸೆ ಮೇಲೆ ಪರಿಣಾಮ ಬೀರಿದೆ.
ತುರ್ತು ಚಿಕಿತ್ಸೆಗೆ ರಾತ್ರಿ ಹೊತ್ತಿನಲ್ಲಿ ಗೋಳು
ಕೊಲ್ಲೂರು ದೇಗುಲಕ್ಕೆ ವಿವಿಧ ರಾಜ್ಯಗಳ ನಾನಾ ಭಾಗದಿಂದ ಆಗಮಿಸುವ ಭಕ್ತರು ಸಹಿತ ಸ್ಥಳೀಯರಿಗೆ ಸಂಜೆಯ ಅನಂತರ ತುರ್ತು ಚಿಕಿತ್ಸೆಗೆ ವೈದ್ಯರ ಕೊರತೆಯಿಂದಾಗಿ ಸುಮಾರು 45 ಕೀ.ಮೀ. ದೂರ ವ್ಯಾಪ್ತಿಯ ಕುಂದಾಪುರಕ್ಕೆ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಸ್ಥಳೀಯವಾಗಿ ರಾತ್ರಿ ಹೊತ್ತಿನಲ್ಲಿ ರೋಗಿಗಳಿಗೆ ಚಿಕಿತ್ಸೆಗಾಗಿ ಯಾವುದೇ ವೈದ್ಯರ ಸೇವೆ ಇಲ್ಲದಿರುವುದು ಈ ಭಾಗದ ಜನರಿಗೆ ನುಂಗಲಾರದ ತುತ್ತಾಗಿದೆ.
24×7 ಸೇವೆಗೆ ಆಗ್ರಹ
ಬಹಳಷ್ಟು ವರ್ಷಗಳಿಂದ ಇಲ್ಲಿನ ನಿವಾಸಿಗಳು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ 24×7 ಸೇವೆಗಾಗಿ ಆಗ್ರಹಿಸಿದ್ದರೂ ಇಲಾಖೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ರೋಗಿಗಳ ತುರ್ತು ಚಿಕಿತ್ಸೆಯ ಮೇಲೆ ಪರಿಣಾಮ ಬೀರಿದೆ. ಕೊಲ್ಲೂರು ದೇಗುಲ, ಗ್ರಾ.ಪಂ. ಆಡಳಿತ ಸೇರಿ ಸೇವಾ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮಸ್ಥರ ಬೇಡಿಕೆ ಈಡೇರಿಸಿದಲ್ಲಿ ಅನುಕೂಲವಾದೀತು.
ಆ್ಯಂಬುಲೆನ್ಸ್ ಕೊರತೆ
ಲಕ್ಷಾಂತರ ಭಕ್ತರ ಧ್ಯಾನ ಕೇಂದ್ರವಾದ ಕೊಲ್ಲೂರು ಸದಾ ಜನನಿಬಿಡ ಪ್ರದೇಶವಾಗಿದ್ದು, ನಾನಾ ಕಾರಣಗಳಿಂದ ಅಸ್ವಸ್ಥರಾಗುವ ಮಂದಿಗೆ ದೂರದ ಕುಂದಾಪುರದ ಆಸ್ಪತ್ರೆಗಳಿಗೆ ಸಾಗಿಸಲು 108 ಆ್ಯಂಬುಲೆನ್ಸ್ ಕೊರತೆಯಿಂದಾಗಿ ಖಾಸಗಿ ವಾಹನಗಳನ್ನು ಅವಲಂಬಿಸಿ, ದುಬಾರಿ ವೆಚ್ಚ ಭರಿಸಿ ಸಾಗಬೇಕಾದ ಪರಿಸ್ಥಿತಿ ಇದೆ. ಕೊಲ್ಲೂರು ಹಾಗೂ ವಂಡ್ಸೆ ಪರಿಸರದಲ್ಲಿ ತುರ್ತು ಅಗತ್ಯತೆಗೆ ಆ್ಯಂಬುಲೆನ್ಸ್ ಸೇವೆ ಒದಗಿಸುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು
ಜನರು ಆಗ್ರಹಿಸಿದ್ದಾರೆ.
Related Articles
ಈಗಾಗಲೇ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲ ಅಗತ್ಯತೆ ಬಗ್ಗೆ ಇಲಾಖೆಯ ಅ ಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ್ಯಂಬುಲೆನ್ಸ್ ಸೇವೆ ಬಗ್ಗೆ ಕೂಡ ಕ್ರಮಕೈಗೊಳ್ಳಲಾಗುವುದು.
– ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು
ಕೊಲ್ಲೂರು ಗ್ರಾಮ ನಿವಾಸಿಗಳಿಗೆ ತುರ್ತು ಅಗತ್ಯವಿರುವ ಪೂರ್ಣ ಕಾಲಿಕ ಆ್ಯಂಬುಲೆನ್ಸ್ ಸೇವೆ ಅಗತ್ಯವಿದೆ. 2018 ರಲ್ಲಿ ಒದಗಿಸಲಾಗಿದ್ದ ಆ್ಯಂಬುಲೆನ್ಸ್ ಸೇವೆ ರದ್ದುಗೊಂಡಿದೆ. ಆ ನಿಟ್ಟಿನಲ್ಲಿ ಇಲಾಖೆ, ಸರಕಾರ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ.
– ರಮೇಶ ಗಾಣಿಗ ಕೊಲ್ಲೂರು,
ತಾ.ಪಂ. ಮಾಜಿ ಸದಸ್ಯರು.
ಡಾ| ಸುಧಾಕರ ನಂಬಿಯಾರ್