Advertisement

ಉಪ್ಪಿ ಹೊಸಮುಖ ಪರಿಚಯಿಸಿದ ನಟ ನಟ ಭಯಂಕರ

11:25 AM Jan 05, 2022 | Team Udayavani |

ರಿಯಲ್‌ಸ್ಟಾರ್‌ ಉಪೇಂದ್ರ ನಿರ್ದೇಶಕನಾಗಿ, ನಾಯಕನಾಗಿ, ಗಾಯಕನಾಗಿ ಗುರುತಿಸಿಕೊಂಡವರು. ಸಿನಿಮಾದ ಜೊತೆಗೆ ಪ್ರಜಾಕೀಯ, ಸಾಮಾಜಿಕ ಕಾರ್ಯಗಳಲ್ಲೂ ತಮ್ಮದೇ ಛಾಪು ಮೂಡಿಸಿರುವ ಉಪೇಂದ್ರ ಮೊದಲ ಬಾರಿಗೆ “ನಟ ಭಯಂಕರ’ ಸಿನಿಮಾದ ಟೈಟಲ್‌ ಟ್ರ್ಯಾಕ್‌ಗೆ ಧ್ವನಿಯಾಗಿದ್ದಾರೆ.

Advertisement

ಬಿಗ್‌ಬಾಸ್‌ ಖ್ಯಾತಿಯ “ನಟ ಭಯಂಕರ’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದ್ದು, ಈ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಉಪ್ಪಿ ಧ್ವನಿಯಲ್ಲಿ ಮೂಡಿಬಂದಿದೆ. “ಇಲ್ಲಿಯವರೆಗೆ ಹಲವು ಸಿನಿಮಾಗಳಿಗೆ ಉಪೇಂದ್ರ ಧ್ವನಿಯಾಗಿದ್ದರೂ, ಸಿನಿಮಾವೊಂದರ ಟೈಟಲ್‌ ಟ್ರ್ಯಾಕ್‌ಗೆ ಧ್ವನಿಯಾಗಿದ್ದು ಇದೇ ಮೊದಲು’ ಅನ್ನೋದು ಪ್ರಥಮ್‌ ಮಾತು.

“ನಟ ಭಯಂಕರ’ ಸಿನಿಮಾಕ್ಕೆ ಉಪ್ಪಿ ಧ್ವನಿಯಾಗಿರುವುದರ ಬಗ್ಗೆ ಮಾತನಾಡುವ ಪ್ರಥಮ್‌, “ನಮ್ಮ ಸಿನಿಮಾದ ಟೈಟಲ್‌ ಟ್ರ್ಯಾಕ್‌ ಹಾಡುವಂತೆ ಉಪೇಂದ್ರ ಅವರನ್ನು ಮೊದಲು ಹೇಳಿಕೊಂಡಾಗ ಅವರು ಖುಷಿಯಿಂದ ಒಪ್ಪಿಕೊಂಡರು. ನಂತರ ಟ್ಯೂನ್‌ ಕಳುಹಿಸಿ ಮೂರ್‍ನಾಲ್ಕು ದಿನವಾದರೂ, ಅವರಿಂದ ಯಾವುದೇ ರಿಪ್ಲೆ ಬರಲಿಲ್ಲ. ಕೊನೆಗೆ ನಾನೇ ಅವರನ್ನು ಈ ಬಗ್ಗೆ ಖುದ್ದಾಗಿ ಭೇಟಿ ಮಾಡಿ ಹಾಡಿನ ಬಗ್ಗೆ ಕೇಳಿದೆ. “ಟ್ಯೂನ್‌ ತುಂಬ ಚೆನ್ನಾಗಿದೆ. ಆದ್ರೆ ಹೈ ಪಿಚ್‌ನಲ್ಲಿ ಇರೋದ್ರಿಂದ, ನಾನು ಈ ಟ್ರ್ಯಾಕ್‌ ಹಾಡೋದು ಕಷ್ಟ. ಬೇರೆ ಯಾರಿಂದಾದ್ರೂ ಹಾಡಿಸಿ’ ಅಂಥ ಉಪೇಂದ್ರ ಸಲಹೆ ಕೊಟ್ಟರು. ಆದ್ರೆ ನಾವು ಮೊದಲೇ ಈ ಟೈಟಲ್‌ ಟ್ರ್ಯಾಕ್‌ನ ಉಪೇಂದ್ರ ಅವರಿಂದಲೇ ಹಾಡಿಸಬೇಕು ಅಂಥ ನಿರ್ಧರಿಸಿದ್ದೆವು. ಹಾಗಾಗಿ ಕೊನೆಗೂ ಹೇಗೋ ಒಪ್ಪಿಸಿ ಅವರಿಂದಲೇ ಈ ಹಾಡು ರೆಕಾರ್ಡಿಂಗ್‌ ಮಾಡಿಸಿದೆವು’ ಎಂದು ಹಾಡಿನ ಹಿಂದಿನ ಕಥೆ ಬಿಚ್ಚಿಡುತ್ತಾರೆ.

ಅಂದಹಾಗೆ, ಉಪ್ಪಿ “ನಟ ಭಯಂಕರ’ ಟ್ರ್ಯಾಕ್‌ಗೆ ಮೂರ್‍ನಾಲ್ಕು ದಿನ ಸಮಯ ತೆಗೆದುಕೊಳ್ಳಲು ಕಾರಣವಿದೆಯಂತೆ. “ನಾವು ಕಳುಹಿಸಿದ ಟ್ಯೂನ್‌ನ ಮೂರ್‍ನಾಲ್ಕು ದಿನ ಉಪ್ಪೇಂದ್ರ ಅವರು ಪ್ರಾಕ್ಟೀಸ್‌ ಮಾಡಿದ ನಂತರ ಓ.ಕೆ ಅಂಥ ಅವರಿಗೆ ಅನಿಸಿದ ಮೇಲೆ ಹಾಡೋದಕ್ಕೆ ಒಪ್ಪಿಕೊಂಡಿದ್ದು, ರೆಕಾರ್ಡಿಂಗ್‌ ಆದ ನಂತರ ಅವರ ಆಪ್ತರ ಮೂಲಕ ಗೊತ್ತಾಯ್ತು’ ಎನ್ನುತ್ತಾರೆ ಪ್ರಥಮ್‌.

ಇನ್ನು ಉಪೇಂದ್ರ ತಮ್ಮ ಗಾಯನದ ಸಂಭಾವನೆಯನ್ನು “ಉಪ್ಪಿ ಫೌಂಡೇಶನ್‌’ ಟ್ರಸ್ಟ್‌ಗೆ ನೀಡಲಾಗಿದ್ದು, ಈ ಟ್ರಸ್ಟ್‌ ಮೂಲಕ ಅಂಗವಿಕಲರಿಗೆ ಕೃತಕ ಕಾಲು ಜೋಡಣೆ, ಮಹಿಳಾ ಸಬಲೀಕರಣ, ವಯೋವೃದ್ಧರ ಕಲ್ಯಾಣ ಕಾರ್ಯಗಳನ್ನು ಉಪ್ಪಿ ಅವರ ಸಂಸ್ಥೆ ಯಾವುದೇ ಪ್ರಚಾರವಿಲ್ಲದೆ ನಡೆಸುತ್ತಿದೆ. ಉಪೇಂದ್ರ ಕೂಡ ಈ ಬಗ್ಗೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಎಂದು ಉಪ್ಪಿ ಹೊಸ ಮುಖವನ್ನು ಪರಿಚಯಿಸಿದ್ದಾರೆ ಪ್ರಥಮ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next