Advertisement

ಸುಳ್ಯ: ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭ

03:18 PM Feb 03, 2023 | Team Udayavani |

ಸುಳ್ಯ: ಬಹುನಿರೀಕ್ಷಿತ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ಸುಳ್ಯ ಸಮೀಪದ ಕಲ್ಲುಮುಟ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭಗೊಂಡಿದ್ದು, ಭರದಿಂದ ಸಾಗುತ್ತಿದೆ. ಅಂದುಕೊಂಡಂತೆ ಕಾಮಗಾರಿ ನಡೆದಲ್ಲಿ ಮುಂದಿನ ವರ್ಷ ಬೇಸಗೆಯಲ್ಲಿ ಕಿಂಡಿ ಅಣೆಕಟ್ಟು ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.

Advertisement

ಬೇಸಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಹಿನ್ನೆಲೆಯಲ್ಲಿ ಹಾಗೂ ನೀರಾವರಿ ಉದ್ದೇಶದಿಂದ ಸುಳ್ಯ ಸಮೀಪ ಹರಿಯುತ್ತಿರುವ ಪಯಸ್ವಿನಿ ಹೊಳೆಗೆ ಕಲ್ಲುಮುಟ್ಲು ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆ ವತಿಯಿಂದ 17 ಕೋಟಿ ರೂ. ಅನುದಾನ ಮಂಜೂರುಗೊಂಡು, ಟೆಂಡರ್‌ ಪ್ರಕ್ರಿಯೆ ನಡೆಸಲಾಗಿತ್ತು. ಕಳೆದ ಡಿ. 9ರಂದು ಸಚಿವ ಎಸ್‌. ಅಂಗಾರ ಕಾಮಗಾರಿಗೆ ಚಾಲನೆ ನೀಡಿದ್ದರು.

ಭರದಿಂದ ಸಾಗುತ್ತಿದೆ ಕಾಮಗಾರಿ
ಉಡುಪಿ ಮೂಲದ ಜಯಶೀಲ ನಾರಾಯಣ ಶೆಟ್ಟಿ ಎಂಬವರು ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭಿಸಲಾಗಿದೆ. ಹರಿಯುತ್ತಿರುವ ಹೊಳೆಯ ನೀರಿಗೆ ಕಾಮಗಾರಿ ನಡೆಸಲು ಅನುಕೂಲವಾಗುವಂತೆ ನೀರನ್ನು ಮಣ್ಣು ಹಾಕಿ ಹಿಡಿದಿಟ್ಟು, ಇನ್ನೊಂದು ಬದಿಯಿಂದ ಹರಿಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಭಾಗದಿಂದ ಕಿಂಡಿ ಅಣೆಕಟ್ಟು ಕಾಮಗಾರಿ ಆರಂಭಿಸಲಾಗಿದೆ. ಸದ್ರಿ ಕಿಂಡಿ ಅಣೆಕಟ್ಟಿನಲ್ಲಿ 9.34 ಮಿಲಿಯನ್‌ ಕ್ಯೂಬಿಕ್‌ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮಗಾರಿ 11 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸರಕಾರ ಸೂಚಿಸಿದ ಸುತ್ತೂಲೆಯಲ್ಲಿದೆ. ಮಳೆಗಾಲ ಕಾಮಗಾರಿ ಅಸಾಧ್ಯವಿರುತ್ತದೆ. ಬಳಿಕ ಕಾಮಗಾರಿ ವೇಗ ಪಡೆದಲ್ಲಿ ಮುಂದಿನ ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ನಿರೀಕ್ಷೆಯಲ್ಲಿ ಜನತೆ
ಸುಳ್ಯ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಪ್ರಸ್ತುತ ಬೇಸಗೆಯಲ್ಲಿ ನೀರಿನ ಅಭಾವ ಕಂಡುಬರುತ್ತದೆ. ಕಲ್ಲುಮುಟ್ಲುನಲ್ಲಿ ಕಿಂಡಿಅಣೆಕಟ್ಟು ಪೂರ್ಣಗೊಂಡಲ್ಲಿ ಈ ಭಾಗದ ನೀರಿನ ಅಭಾವ ದೂರವಾಗಲಿದೆ ಎನ್ನುವುದು ಜನತೆಯ ನಿರೀಕ್ಷೆ. ಜತೆಗೆ ಇದರ ಪಕ್ಕದಲ್ಲಿ ಜಾಕ್‌ ವೆಲ್‌ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಮುಂದಕ್ಕೆ ಅಧಿಕ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕದ ಅಗತ್ಯತೆ ಇಲ್ಲಿಗಿದೆ.

Advertisement

ಶೇ. 40 ಕಾಮಗಾರಿ ಪೂರ್ಣ
ಸುಳ್ಯ ನಗರಕ್ಕೆ ನೀರಿನ ಉದ್ದೇಶದಿಂದ ಕಲ್ಲುಮುಟ್ಲು ನಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಭರದಿಂದ ನಡೆಯುತ್ತಿದೆ. ಈಗಾಗಲೇ ಶೇ. 40 ಕಾಮಗಾರಿ ನಡೆದಿದೆ. ಎಪ್ರಿಲ್‌ ಮೊದಲು ಕಾಮಗಾರಿ ಮುಗಿಸಲು ಪ್ರಯತ್ನಿಸಲಾಗುವುದು.
-ಹೇಮಂತ್‌ ಕುಮಾರ್‌, ಎಂಜಿನಿಯರ್‌,
ಸಣ್ಣ ನೀರಾವರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next