Advertisement

ನಿರ್ಗತಿಕ ಯುವಜನರ ಪಾಲಿಗೆ ಭರವಸೆ “ಉಪಕಾರ್‌’

09:01 AM Aug 14, 2022 | Team Udayavani |

ಮಂಗಳೂರು : ಅನಾಥರು, ನಿರ್ಗತಿಕ ಮಕ್ಕಳು ಕೂಡ ಆರ್ಥಿಕವಾಗಿ ಸ್ವಾವಲಂಬಿಗಳಾಗಲು “ಉಪಕಾರ್‌’ ಆಧಾರವಾಗಿದೆ.

Advertisement

ಈ ಹಿಂದೆ ಸರಕಾರದ ಅಥವಾ ಸರಕಾರೇತರ ಸಂಸ್ಥೆಗಳ ಪಾಲನ ಸಂಸ್ಥೆಗಳಲ್ಲಿ ಆಶ್ರಯ ಪಡೆದು 18 ವರ್ಷ ತುಂಬಿದ ಅನಂತರ ಅಲ್ಲಿಂದ ದಿಕ್ಕು ದೆಸೆ ಇಲ್ಲದಂತೆ ತೆರಳುತ್ತಿದ್ದ ಅನಾಥರ
ಪಾಲಿಗೆ “ಉಪಕಾರ್‌’ ಬೆಳಕಾಗುತ್ತಿದೆ.

ಈ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ ಹೆಣ್ಣು ಮಕ್ಕಳೂ ಸೇರಿದಂತೆ 34 ಮಂದಿ ಆಯ್ಕೆಯಾಗಿದ್ದು ಅವರ ಬದುಕಿನಲ್ಲಿ ಭರವಸೆ ಮೂಡಿಸಿದೆ. ಉಡುಪಿ ಜಿಲ್ಲೆಯಲ್ಲಿ 8 ಮಂದಿಯನ್ನು ಗುರುತಿಸ ಲಾಗಿದ್ದು ಅವರು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆಯ್ಕೆಯಾಗಿಲ್ಲ.

ಏನಿದು ಉಪಕಾರ್‌?
ಬಾಲನ್ಯಾಯ ಮಕ್ಕಳ (ಪಾಲನೆ ಮತ್ತು ರಕ್ಷಣೆ) ಕಾಯಿದೆ-2015ರಡಿ ನೋಂದಾಯಿತ ಮಕ್ಕಳ ಪಾಲನ ಸಂಸ್ಥೆಗಳಿಂದ ಬಿಡುಗಡೆಯಾಗುವ 18 ವರ್ಷ ಮೀರಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ವರೆಗೆ ಆರ್ಥಿಕ ಸೌಲಭ್ಯ ಒದಗಿಸುವುದು “ಉಪಕಾರ್‌’ನ ಉದ್ದೇಶ. ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ವರೆಗೆ ಅಥವಾ ಗರಿಷ್ಠ 3 ವರ್ಷಗಳ ಅವಧಿಗೆ ಪ್ರತೀ ತಿಂಗಳು 5,000 ರೂ. ಸಹಾಯ ನೀಡಲಾಗುತ್ತದೆ. ವಿದ್ಯಾಭ್ಯಾಸ ಮುಂದುವರಿಸಲು, ವೃತ್ತಿಪರ ಕೌಶಲ ತರಬೇತಿ ಪಡೆಯಲು, ಸ್ವಂತ ಉದ್ಯೋಗ ಆರಂಭಿಸಲು ಅಥವಾ ಇತರ ಆರ್ಥಿಕ ಸ್ವಾವಲಂಬನೆಗೆ ಪೂರಕವಾದ ಚಟುವಟಿಕೆಗೆ ಇದನ್ನು ಬಳಸಿಕೊಳ್ಳಬಹುದಾಗಿದೆ.

2 ಬಾಲಮಂದಿರ ಶೀಘ್ರ ಆರಂಭ
ದ.ಕ. ಜಿಲ್ಲೆಯಲ್ಲಿ 76 ಮಕ್ಕಳ ಪಾಲನ ಸಂಸ್ಥೆಗಳಿವೆ, ಜಿಲ್ಲೆಗೆ ಇನ್ನೊಂದು ಬಾಲಕಿಯರ ಬಾಲಮಂದಿರ ಮಂಜೂರಾಗಿದ್ದು ಮಂಗಳೂರಿನಲ್ಲಿ ಕಾವೂರಿನಲ್ಲಿ ಆರಂಭವಾಗಲಿದೆ. ಉಡುಪಿಯಲ್ಲಿ ಬಾಲಕಿಯರ ಬಾಲಮಂದಿರವಿದೆ. ಬಾಲಕರ ಬಾಲಮಂದಿರ ಮಂಜೂರಾಗಿದ್ದು ಉಡುಪಿಯ ಕುಂಜಿಬೆಟ್ಟಿನಲ್ಲಿ ಶೀಘ್ರ ಆರಭವಾಗಲಿದೆ. ವಿವಿಧ ಕಾರಣಗಳಿಂದ ಪರಿತ್ಯಕ್ತರಾದ ಮಕ್ಕಳಿಗೆ ಆಶ್ರಯ, ಶಿಕ್ಷಣ ಒದಗಿಸುವಲ್ಲಿ ಇಂತಹ ಪಾಲನ ಸಂಸ್ಥೆಗಳು ನೆರವಾಗುತ್ತಿದ್ದರೆ ಇದೀಗ ಉಪಕಾರ್‌ ಮಕ್ಕಳ ಸ್ವಾವಲಂಬನೆಗೆ ನೆರವಾಗಲಿದೆ.

Advertisement

ವಿಭಾಗವಾರು ಅನುಪಾಲನ ಗೃಹ
18 ವರ್ಷ ಪೂರ್ಣಗೊಂಡ ಅನಾಥ, ಪರಿತ್ಯಕ್ತರಿಗೆ ಈಗ ಸೂಕ್ತ ಆಶ್ರಯ ವ್ಯವಸ್ಥೆ ಇಲ್ಲ. ಬೆಳಗಾವಿಯಲ್ಲಿ ಮಾತ್ರ ಅನುಪಾಲನ ಗೃಹವಿದೆ. ಹೆಣ್ಣು ಮಕ್ಕಳಿಗಾಗಿ ರಾಜ್ಯದಲ್ಲಿ ರಾಜ್ಯದ 6 ವಿಭಾಗಗಳಿಗೆ ತಲಾ ಒಂದು ಅನುಪಾಲನ ಗೃಹ ಮಂಜೂರಾಗಿದ್ದು ಶೀಘ್ರ ಆರಂಭವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಾಯಿತ ಎಲ್ಲ ಮಕ್ಕಳ ಪಾಲನ ಸಂಸ್ಥೆಗಳಲ್ಲಿರುವ 18 ವರ್ಷ ಪೂರ್ಣಗೊಂಡ ಮಕ್ಕಳ ಮುಂದಿನ ಪುನರ್ವಸತಿಗಾಗಿ ಹಾಗೂ ಸಮಾಜದಲ್ಲಿ ಗೌರವಯುತವಾಗಿ ಮತ್ತು ಸ್ವತಂತ್ರವಾಗಿ ಜೀವನ ನಿರ್ವಹಿಸಲು ಉಪಕಾರ್‌ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು ದ.ಕ.ದಲ್ಲಿ ಯೋಜನೆಯಡಿ ಪ್ರಥಮ ಹಂತದಲ್ಲಿ 34 ಮಂದಿ ಅರ್ಹರನ್ನು ಆಯ್ಕೆ ಮಾಡಲಾಗಿದೆ.
– ಯಮುನಾ, ಪ್ರಭಾರ ಮಕ್ಕಳ ರಕ್ಷಣಾಧಿಕಾರಿ, ದ.ಕ ಜಿಲ್ಲೆ

ಉಪಕಾರ್‌ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿರುವ ಮಕ್ಕಳ ಪಾಲನ ಸಂಸ್ಥೆಗಳಿಂದಲೂ 8 ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ ಈಗಾಗಲೇ ಕೆಲವು ಮಂದಿ ಸ್ಟೇಟ್‌ ಹೋಂನಲ್ಲಿ ಆಶ್ರಯ ಪಡೆದಿರುವುದರಿಂದ, ಇನ್ನು ಕೆಲವರು 3 ವರ್ಷಗಳಿಗಿಂತ ಕಡಿಮೆ ಅವಧಿಗೆ ಪಾಲನ ಸಂಸ್ಥೆಯಲ್ಲಿ ಇದ್ದುದರಿಂದ ಆಯ್ಕೆಯಾಗಿಲ್ಲ. ಈ ಬಾರಿ ಮತ್ತೆ ಕೆಲವು ಮಕ್ಕಳನ್ನು ಗುರುತಿಸಲಾಗುವುದು. ಅರ್ಹರೆಲ್ಲರಿಗೂ ಪ್ರಯೋಜನ ಸಿಗುವಂತೆ ಮಾಡಲಾಗುವುದು.
– ಕುಮಾರ್‌ ನಾೖಕ್‌, ಪ್ರಭಾರ ಮಕ್ಕಳ ರಕ್ಷಣಾಧಿಕಾರಿ, ಉಡುಪಿ ಜಿಲ್ಲೆ

– ಸಂತೋಷ್ ಬೆಳ್ಳಿಬೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next