ಉತ್ತರ ಪ್ರದೇಶ: ಲಕ್ನೋದ ಗೋಮತಿ ನಗರ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಮಾರಾಟಕ್ಕಿಟ್ಟಿದ್ದ ಮಣ್ಣಿನ ಹಣತೆಗಳನ್ನು ಮಾರುತ್ತಿದ್ದ ಅಂಗಡಿಯೊಂದರ ಮೇಲೆ ದಾಳಿ ಮಾಡಿ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳನ್ನು ಹಾಳು ಮಾಡಿದ ಆರೋಪದ ಮೇಲೆ ಮಹಿಳಾ ವೈದ್ಯೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ಮಹಿಳೆ ಅಂಗಡಿಯನ್ನು ಧ್ವಂಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಮಹಿಳೆ ತನ್ನ ಮನೆ ಮುಂದೆ ಮಳಿಗೆಗಳನ್ನು ಹಾಕಿದ್ದರಿಂದ ಅಸಮಾದಾನಗೊಂಡಿದ್ದರು ಮತ್ತು ಅಂಗಡಿಗಳನ್ನು ತೆರವುಗೊಳಿಸುವಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಆದರೆ ಅಂಗಡಿಗಳನ್ನು ತೆಗೆಯದಿದ್ದಾಗ, ಅಂಗಡಿಯ ಮಣ್ಣಿನ ಹಣತೆಗಳ ಮೇಲೆ ನೀರು ಸುರಿದು, ದೊಣ್ಣೆಯಿಂದ ಒಡೆದು ಹಾಕಿರುವುದಾಗಿ ವರದಿ ತಿಳಿಸಿದೆ.
Related Articles
ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಕಾನೂನು ಕೈಗೆತ್ತಿಕೊಂಡ ಮಹಿಳೆಯ ವಿರುದ್ಧ ಅಂಗಡಿಯ ಮಾಲೀಕರು ಲಿಖಿತ ದೂರು ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಅಂಗಡಿಯನ್ನು ವೈದ್ಯರ ನಿವಾಸಕ್ಕೆ ಸಂಬಂಧಿಸಿದ ಜಾಗದಲ್ಲಿ ನಿರ್ಮಿಸಲಾಗಿಲ್ಲ ಬದಲಿಗೆ ಮನೆಯ ಎದುರಿನ ರಸ್ತೆಯಲ್ಲಿ ಮಾಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 427 (ಹಾನಿ ಉಂಟುಮಾಡುವ ಕಿಡಿಗೇಡಿತನ) ಮತ್ತು 504 (ಶಾಂತಿಗೆ ಭಂಗ, ಅಶಾಂತಿಗೆ ಪ್ರಚೋದಿಸುವ ಉದ್ದೇಶ, ಉದ್ದೇಶಪೂರ್ವಕ ಅವಮಾನ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ವೈದ್ಯರ ಮೇಲೆ ಆರೋಪ ದಾಖಲಿಸಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.