ನವದೆಹಲಿ: ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದ ಕೋವಿಡ್ ಕರ್ಫ್ಯೂವನ್ನು ತೆರವುಗೊಳಿಸಿರುವುದಾಗಿ ಮಂಗಳವಾರ(ಜೂನ್ 08) ಘೋಷಿಸಿದೆ.
ಇದನ್ನೂ ಓದಿ:ಸಿಇಟಿ ಮಾರ್ಕ್ ಆಧಾರದಲ್ಲೇ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಿರ್ಧಾರ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19 ಪರಿಸ್ಥಿತಿಯ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ನಂತರ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂವನ್ನು ಸಡಿಲಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ತಿಳಿಸಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ 600ಕ್ಕಿಂತ ಕಡಿಮೆ ಪ್ರಮಾಣದ ಕೋವಿಡ್ 19 ಸಕ್ರಿಯ ಪ್ರಕರಣಗಳು ಕಂಡುಬಂದ ನಂತರ ಉತ್ತರಪ್ರದೇಶ ಸರ್ಕಾರ ಈ ಘೋಷಣೆ ಹೊರಡಿಸಿರುವುದಾಗಿ ವರದಿ ಹೇಳಿದೆ. ಬುಧವಾರ(ಜೂನ್ 09)ದಿಂದ ಎಲ್ಲಾ ಜಿಲ್ಲೆಯ ಕೋವಿಡ್ ಕರ್ಫ್ಯೂವನ್ನು ಸಡಿಲಗೊಳಿಸಲಾಗುವುದು ಎಂದು ಹೇಳಿದೆ.
ಬುಧವಾರದಿಂದ ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೆ ಕೋವಿಡ್ ಕರ್ಫ್ಯೂ ಸಡಿಲಗೊಳಿಸಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರದ ವಕ್ತಾರರು ವಿವರ ನೀಡಿದ್ದಾರೆ. ಇನ್ನು ಸಂಜೆ 7ರಿಂದ ಬೆಳಗ್ಗೆ 7ರವರೆಗೆ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಎಂದಿನಂತೆ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಭಾನುವಾರ ಉತ್ತರಪ್ರದೇಶದ ಮೀರತ್, ಸಹರಣ್ ಪುರ್ ಮತ್ತು ಗೋರಖ್ ಪುರ್ ಜಿಲ್ಲೆಯಲ್ಲಿ 600ಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಈ ಮೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಕೋವಿಡ್ ಕರ್ಫ್ಯೂವನ್ನು ತೆರವುಗೊಳಿಸಿತ್ತು ಎಂದು ವರದಿ ತಿಳಿಸಿದೆ.