ಉತ್ತರ ಪ್ರದೇಶದ ಯೋಗಿ ಸರ್ಕಾರವು ಶಿಕ್ಷಣವನ್ನು ಸುಧಾರಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ಅಮ್ರೋಹಾದಲ್ಲಿ, ಕೆಲವು ಮಹಿಳಾ ಶಿಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ದಿ ಪಡೆಯಲು ಇಲ್ಲಸಲ್ಲದ ಕಸರತ್ತನ್ನು ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ ಶಾಲೆಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಬದಲು ಶಾಲೆಗಳಲ್ಲೂ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಚಾನೆಲ್ ಗೆ ಚಂದಾದಾರರಾಗುವಂತೆ ಜೊತೆಗೆ ತಮ್ಮ ವಿಡಿಯೋಗಳನ್ನು ಇತರರಿಗೆ ಶೇರ್ ಮಾಡುವಂತೆ ಒತ್ತಾಯ ಮಾಡುತ್ತಾರೆಂಬ ಅಂಶ ಬೆಳಕಿಗೆ ಬಂದಿದೆ.
ಈ ಪ್ರಕರಣ ನಡೆದಿರುವುದು ಅಮ್ರೋಹಾದ ಹಸನ್‌ಪುರ ತಹಸಿಲ್ ಪ್ರದೇಶದ ಖುಂಗವಾಲಿ ಗ್ರಾಮದ್ದು.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ನಿಯೋಜನೆಗೊಂಡಿರುವ ಒಬ್ಬರಲ್ಲ ನಾಲ್ವರು ಮಹಿಳಾ ಶಿಕ್ಷಕಿಯರ ಅವ್ಯವಹಾರ ಬೆಳಕಿಗೆ ಬಂದಿದೆ. ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ನೀಡಿರುವ ದೂರಿನನ್ವಯ, ಈ ನಾಲ್ವರು ಮಹಿಳಾ ಶಿಕ್ಷಕಿಯರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲು ರೀಲ್ಸ್ ಮಾಡುವುದರಲ್ಲೇ ಬ್ಯುಸಿಯಂತೆ.
ಕೆಲ ಶಿಕ್ಷಕಿಯರು ಸೇರಿ ರೀಲ್ಸ್ ಮಾಡುತ್ತಾರಂತೆ ಅಷ್ಟು ಮಾತ್ರವಲ್ಲದೆ ಶಿಕ್ಷಕಿಯರು ಮಾಡಿರುವ ರೀಲ್ಸ್ ಗಳು ಹೆಚ್ಚು ಹೆಚ್ಚು ಪ್ರಚಾರ ಪಡೆಯಬೇಕೆಂದು ಶಾಲೆಯ ವಿದ್ಯಾರ್ಥಿಗಳಿಗೆ ತಾವು ಮನೆಗೆ ಹೋದಾಗ ಪೋಷಕರ ಮೊಬೈಲ್ ನಲ್ಲಿ ತಮ್ಮ ಚಾನೆಲ್ ನಲ್ಲಿರುವ ವಿಡಿಯೋಗಳಿಗೆ ಲೈಕ್ ಕೊಟ್ಟು ಶೇರ್ ಮಾಡುವಂತೆ ಹೇಳುತ್ತಾರಂತೆ ಒಂದು ವೇಳೆ ವಿದ್ಯಾರ್ಥಿಗಳು ಆ ಕೆಲಸವನ್ನು ಮಾಡದಿದ್ದರೆ ತರಗತಿಯಲ್ಲಿ ಫೇಲ್ ಮಾಡುವ ಬೆದರಿಕೆಯನ್ನು, ಇಲ್ಲದಿದ್ದರೆ ಬೇರೆ ಯಾವುದೇ ಶಿಕ್ಷೆ ನೀಡುವ ಬೆದರಿಕೆಯನ್ನು ಹಾಕುತ್ತಾರಂತೆ, ಇದರಿಂದ ಕೆಲ ವಿದ್ಯಾರ್ಥಿಗಳು ಮನೆಗೆ ಬಂದಾಗ ಪೋಷಕರ ಮೊಬೈಲ್ ತೆಗೆದುಕೊಂಡು ಶಿಕ್ಷಕಿಯರು ಮಾಡಿರುವ ರೀಲ್ಸ್ ಗಳಿಗೆ ಲೈಕ್ ಕೊಟ್ಟೆ ಶೇರ್ ಮಾಡುತ್ತಾರಂತೆ ಈ ವಿಚಾರ ಮಕ್ಕಳ ಪೋಷಕರಿಗೆ ಗೊತ್ತಾಗಿ ಇದೀಗ ಶಿಕ್ಷಕಿಯರ ವಿರುದ್ಧ ಪೋಷಕರು ದೂರು ನೀಡಿದ್ದಾರೆ
ಶೇರ್ ಮಾಡದಿದ್ದರೆ ಮಕ್ಕಳಿಗೆ ಹೊಡೆಯುತ್ತಾರೆ
ಈ ನಾಲ್ವರು ಶಿಕ್ಷಕಿಯರು ಶಾಲೆಯಲ್ಲಿ ಡ್ಯಾನ್ಸ್ ವಿಡಿಯೋ ರೆಕಾರ್ಡ್ ಮಾಡಿ ಮೊದಲು ಫೇಸ್ ಬುಕ್, ಇನ್ ಸ್ಟಾಗ್ರಾಂ, ಯೂಟ್ಯೂಬ್ ನಲ್ಲಿ ವೈರಲ್ ಮಾಡಿ ನಂತರ ಶಾಲಾ ಮಕ್ಕಳಿಗೆ ಲೈಕ್ ಮಾಡಿ ಸಬ್ ಸ್ಕ್ರೈಬ್ ಮಾಡುವಂತೆ ಹೇಳುತ್ತಾರಂತೆ ಒಂದು ವೇಳೆ ಯಾವುದೇ ವಿದ್ಯಾರ್ಥಿ ವಿಡಿಯೋ ಅನ್ನು ಶೇರ್ ಮಾಡದಿದ್ದರೆ ಆತನಿಗೆ ಹೊಡೆದು ಶಿಕ್ಷೆ ನೀಡುತ್ತಾರಂತೆ.
ಶಿಕ್ಷೆ ನೀಡುವ ಭರವಸೆ
ಮತ್ತೊಂದೆಡೆ, ಗ್ರಾಮಸ್ಥರ ದೂರು ಮತ್ತು ವೀಡಿಯೊ ವೈರಲ್ ಆದ ನಂತರ, ಬ್ಲಾಕ್ ಶಿಕ್ಷಣಾಧಿಕಾರಿ ಭರತ್ ಭೂಷಣ್ ಸಿಂಗ್ ಹೇಳಿಕೆ ನೀಡಿದ್ದು, ಶಿಕ್ಷಕಿಯರ ವಿಷಯ ಗಮನಕ್ಕೆ ಬಂದಿದ್ದು, ವೀಡಿಯೊದ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಒಂದು ವೇಳೆ ತಪ್ಪು ನಡೆದಿರುವುದು ಕಂಡುಬಂದಲ್ಲಿ ಮಹಿಳಾ ಶಿಕ್ಷಕಿಯರ ವಿರುದ್ಧ ಇಲಾಖೆಯಿಂದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Mine Collapses: ಜಿಂಬಾಬ್ವೆಯಲ್ಲಿ ಚಿನ್ನದ ಗಣಿ ಕುಸಿತ: 6 ಮಂದಿ ಮೃತ್ಯು, 15 ಮಂದಿ ನಾಪತ್ತೆ